ಜಿಲ್ಲೆ

ಯುವಜನರು ದುಶ್ಚಟಗಳಿಂದ ದೂರ ಇರಬೇಕು : ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್

ಮೈಸೂರು: ಯುವಜನರು ದುಶ್ಚಟಗಳಿಂದ ದೂರವಿರಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಕರೆ ನೀಡಿದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಫಾರ್ಮಸಿ ಮತ್ತು ಲೈಫ್ ಸೈನ್ಸ್ ವಿದ್ಯಾರ್ಥಿಗಳ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಕ್ಷೇತ್ರವು ಬಹಳ ಶ್ರೇಷ್ಠವಾದುದು. ಹೊಸ ಸಂಶೋಧನೆಗಳನ್ನು ಮಾಡಿ ದೇಶಕ್ಕೆ ಕೀರ್ತಿ ತರಬೇಕು. ಯುವ ಸಮೂಹಕ್ಕೆ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ಸಾಮರ್ಥ್ಯವಿರುತ್ತದೆ. ಆದರೆ, ಈ ದಿನಗಳಲ್ಲಿ ಸೈಬರ್ ಕ್ರೈಮ್, ಡ್ರಗ್ಸ್ ಮುಂತಾದ ಜಾಲಗಳಲ್ಲಿ ಯುವಜನರು ಸಿಲುಕುತ್ತಿರುವುದು ದುರದೃಷ್ಟಕರ. ವಿದ್ಯಾರ್ಥಿಗಳಿಗೆ ಕಾನೂನಿನ ಅರಿವಿರಬೇಕು. ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ದಿನನಿತ್ಯ ಓದಿ ಜ್ಞಾನ ಸಂಗ್ರಹಿಸಬೇಕು. ಇಂತಹ ಶಿಬಿರದಿಂದ ಮನಃಶಾಂತಿ ಲಭಿಸುತ್ತದೆ ಎಂದು ತಿಳಿಸಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಕೆ.ಎಂ. ಪ್ರಶಾಂತ್ ಮಾತನಾಡಿ, ಸಮಸ್ಯೆಗಳು ಸಾಧನೆಗೆ ಅಡ್ಡಿಯಾಗಬಾರದು. ಅಶಿಸ್ತಿನಿಂದ ಜೀವನ ಅಧಃಪತನಕ್ಕೊಳಗಾಗುತ್ತದೆ. ಪ್ರಯತ್ನಗಳು ಉತ್ತಮವಾಗಿದ್ದರೆ ದೇವರ ಸಹಾಯವಿರುತ್ತದೆ. ಕೀಳರಿಮೆ ಮನೋಭಾವನೆಯನ್ನು ತೊರೆಯಬೇಕು ಎಂದುರ.

ಗುರಿ ಮತ್ತು ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಲಭಿಸುತ್ತದೆ. ದೇಹಕ್ಕೆ ಆಹಾರದಿಂದ ಶಕ್ತಿ ದೊರೆತಂತೆ ಮನಸ್ಸಿಗೆ ಈ ರೀತಿಯ ಶಿಬಿರಗಳಿಂದ ಆಹಾರ ದೊರೆಯುತ್ತದೆ. ನನ್ನ ಈ ಯಶಸ್ಸಿಗೆ ಸುತ್ತೂರು ಶ್ರೀಗಳ ಆರ್ಶೀವಾದ ಕಾರಣ ಎಂದು ನುಡಿದರು.

ಬೆಂಗಳೂರು ಅಲಮಿರಾಪ್ ನ್ಯೂಟ್ರೇಷನ್‌ನ ಪರಿಮಳ ಜಗ್ಗೇಶ್ ಮಾತನಾಡಿ, ಜೀವನದಲ್ಲಿ ಆರೋಗ್ಯಕ್ಕಿಂತ ಮಿಗಿಲಾದುದ್ದು ಏನೂ ಇಲ್ಲ. ಪ್ರಸ್ತುತ ದಿನಗಳು ಅತ್ಯಂತ ಸ್ಪರ್ಧಾತ್ಮಕವಾಗಿದ್ದು ಏನೇ ಸಮಸ್ಯೆಗಳು ಬಂದರು ಅದಕ್ಕೆ ಸೂಕ್ತ ಪರಿಹಾರಗಳು ಸಾಧ್ಯವಿದೆ. ಒತ್ತಡಕ್ಕೆ ಒಳಗಾಗದೆ ಅವುಗಳನ್ನು ಪರಿಹರಿಸಿಕೊಳ್ಳಬೇಕು. ಉತ್ತಮ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಂಡು ಪರಿಶುದ್ಧವಾದ ಮನಸ್ಸಿನಿಂದ ಬದುಕಬೇಕು ಎಂದು ಕರೆ ನೀಡಿದರು.

ಡಾ. ನಾಗಮಣಿ ಎಸ್ ಖಂಡ್ರೆ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಎಲ್ಲರೂ ಸಮಾನರು. ನಮ್ಮಲ್ಲಿ ಎಷ್ಟೇ ವೈವಿದ್ಯತೆ ಇದ್ದರು ನಾವೆಲ್ಲರೂ ಒಂದೇ ಎಂಬ ಭಾವನೆ ಇದೆ. ವೈಜ್ಞಾನಿಕ ಮತ್ತು ಆಧ್ಯಾತ್ಮಿಕತೆಯ ಮೇಲೆ ನಮ್ಮ ಸಂಸ್ಕೃತಿಯು ರೂಪುಗೊಂಡಿದೆ. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವ ಎಂಬುದು ಭಾರತೀಯರ ವೇದವಾಕ್ಯಗಳಾಗಿವೆ. ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಗೌರವವಿರಬೇಕೆ ಹೊರೆತು ದಾಸರಾಗಬಾರದು. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಅನುಕರಿಸಬೇಕು ಎಂದು ತಿಳಿಸಿದರು.

ಡಾ. ವೆಂಕಟೇಶ್ ಬಿ ಕುಲಕರ್ಣಿ ಮಾತನಾಡಿ, ಭಾರತೀಯ ಸಂಗೀತವು ಅದ್ವಿತೀಯವಾದುದು. ಸಂಗೀತವನ್ನು ಆಲಿಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಶಾಸ್ತ್ರೀಯ ಸಂಗೀತವು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಸಂಗೀತವನ್ನು ಆಲಿಸುವುದರಿಂದ ಹಾಗೂ ಕಲಿಯುವುದರಿಂದ ಮಾನಸಿಕ ಸ್ಥಿರತೆ ಹೊಂದಬಹುದು. ಸಂಗೀತಕ್ಕೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಎಂದು ತಿಳಿಸಿದರು.

ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಮತ್ತು ಯೋಗಾಭ್ಯಾಸಗಳಲ್ಲಿ ಸಂಜೆ ದೇಸಿ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಂಜೆಯ ಪ್ರಾರ್ಥನೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಿಬಿರದಲ್ಲಿ 140 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.