ಸಿಂದಗಿ: ವಿದ್ಯಾರ್ಥಿಗಳು ಮತ್ತು ಯುವಕರು ನಮ್ಮ ಪ್ರಾಚೀನ ಆಟಗಳಾದ ಕುಸ್ತಿ, ಕಬಡ್ಡಿ ಹಾಗೂ ಖೋಖೋ ಆಟಗಳತ್ತ ಮರಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಎಲೈಟ್ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ವಿಜಯಪುರದ ಆಶ್ರಯದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜು ಮಟ್ಟದಲ್ಲಿ ಕುಸ್ತಿ ಪಂದ್ಯಗಳನ್ನು ರೂಪಿಸುವ ಮೂಲಕ ದೇಶಿ ಕ್ರೀಡೆಗಳ ಪುನಶ್ಚೇತನಕ್ಕೆ ಶ್ರಮಿಸುತ್ತಿದೆ. ಇಂದಿನ ಬಹುತೇಕ ಆಯೋಜಕರು ಹಾಗೂ ಆಟಗಾರರು ಕ್ರಿಕೆಟ್‌ನತ್ತ ಚಿತ್ತ ನೆಟ್ಟಿದ್ದಾರೆ. ಆದರೆ ದೈಹಿಕ ಸದೃಢತೆಯನ್ನು ಹೆಚ್ಚಿಸುವ ಸಾಮರ್ಥ್ಯದ ಕ್ರೀಡೆಗಳನ್ನು ದೂರ ಮಾಡುತ್ತಿದ್ದಾರೆ. ಇತ್ತೀಚೆಗೆ ಮೊಬೈಲ್ ಗೇಮ್‌ಗಳತ್ತ ಹೊರಳಿರುವ ಯುವಕರು ನಮ್ಮ ಪ್ರಾಚೀನ ಆಟಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದರು.
ಕುಸ್ತಿಗೆ ಹೆಸರಾದ ಬೂದಿಹಾಳ ಹಾಗೂ ಚೌಧರಿ ಅವರ ಮನೆತನಗಳು ತಮ್ಮ ಮನೆ ಅಂಗಳವನ್ನೇ ಕುಸ್ತಿ ಮೈದಾನವಾಗಿಸಿ ಅನೇಕ ಕ್ರೀಡಾಪಟುಗಳನ್ನು ರೂಪಿಸಿದ್ದಾರೆ. ಅಂದು ದೈಹಿಕ ನಿರ್ದೇಶಕರಾಗಿದ್ದ ಆರ್.ಬಿ. ಬೂದಿಹಾಳ, ಶಂಕರಲಿಂಗ ಚೌಧರಿ, ಕೆ.ಎಚ್. ಸೋಮಾಪುರ ನಂತರದಲ್ಲಿ ಶಾಂತೇಶ ದುರ್ಗಿ ಅವರುಗಳು ಕುಸ್ತಿಗಾಗಿ ತಮ್ಮ ಜೀವವನ್ನೇ ಮುಡುಪಾಗಿಸಿದ್ದು ಇತಿಹಾಸ ಎಂದು ಹೇಳಿದರು.
ದೈಹಿಕ ನಿರ್ದೇಶಕ ಶಾಂತೇಶ ದುರ್ಗಿ ಮಾತನಾಡಿ, ರಾಜ್ಯ ಸರ್ಕಾರ ನಶಿಸುತ್ತಿರುವ ಕುಸ್ತಿ ಕ್ರೀಡೆಯ ಪುನಶ್ಚೇತನಕ್ಕಾಗಿ 3ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಿಂದಗಿಯಲ್ಲಿ ಕರ್ನಾಟಕ ಕುಸ್ತಿ ಹಬ್ಬವನ್ನು ಆಚರಿಸುವಂತಾಗಲಿ. ಅಲ್ಲದೇ ಕುಸ್ತಿಗಾಗಿ ನಗರದಲ್ಲಿ ಒಂದು ಗರಡಿಮನೆ ನಿರ್ಮಾಣವಾಗಬೇಕು ಎಂದರು.
ಎಲೈಟ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಎಂ.ಎಂ. ಅಸಂತಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐ ಡಿ. ಹುಲಗಪ್ಪ, ಮುತ್ತು ಮುಂಡೇವಾಡಗಿ, ಉಮೇಶ ಜೋಗೂರ, ಕೆ.ಎಚ್. ಸೋಮಾಪುರ, ಕುಸ್ತಿಪಟು ಸಿದ್ಲಿಂಗಪ್ಪ ಬೂದಿಹಾಳ ಸಾಹುಕಾರ, ಸಿದ್ದು ಬುಳ್ಳಾ, ಪ್ರಾಚಾರ್ಯ ಐ.ಎ. ಜುಮನಾಳ ಸೇರಿದಂತೆ ಮತ್ತಿತರರಿದ್ದರು.