ಮಾಯಕೊಂಡ : ಗ್ರಾಮೀಣ ಪ್ರದೇಶಗಳಲ್ಲಿ ಕಬಡ್ಡಿ-ವಾಲಿಬಾಲ್, ಕ್ರಿಕೆಟ್ ಸೇರಿದಂತೆ ಹಲವಾರು ಕ್ರೀಡೆಗಳನ್ನು ಯುವಕರು ಉಳಿಸಿ ಬೆಳೆಸಬೇಕು ಎಂದು ಶಾಸಕ ಕೆ ಎಸ್ ಬಸವಂತಪ್ಪ ತಿಳಿಸಿದರು.
ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳಲ್ಲಿ ಕ್ರೀಡೆ, ನಾಟಕ ಸಂಗೀತ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜನೆ ಮಾಡಬೇಕು ಎಂದರು.
ತೋಳಹುಣಸೆ ಗ್ರಾಮದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ವೀರ ಯೋಧರನ್ನು ದೇಶದ ಭದ್ರತೆಗಾಗಿ ನೀಡಿರುವುದು ಶ್ಲಾಘನೀಯ, ಶಾಲಾ ಕಾಲೇಜು ದಿನಗಳಲ್ಲಿ ಯುವಕ ಯುವತಿಯರು ಹೆಚ್ಚು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕ. ಕ್ರೀಡಾ ಕೋಟಾದಿಂದ ಸರ್ಕಾರಿ ಉದ್ಯೋಗ ಗಿಟ್ಟಿಸಬಹುದು ಎಂದು ಹೇಳಿದರು.
ಯುವಕರು ಕ್ರಿಕೆಟ್ ಕಬಡ್ಡಿ ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸುವುದರಿಂದ ದೇಹದ ಆರೋಗ್ಯ ಸದೃಢತೆ ಕಾಪಾಡಿಕೊಳ್ಳಬಹುದು ಈ ನಿಟ್ಟಿನಲ್ಲಿ ಯುವಕರು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಲೋಕೇಶ್ ನಾಯ್್ಕ ಮಾರುತೇಶ್, ಗ್ರಾಮ ಪಂಚಾಯತಿ ಸದಸ್ಯರು ಪ್ರೀಮಿಯರ್ ಲೀಗ್ ಪಂದ್ಯಾವಳಿ ಆಯೋಜನೆ ಮಾಡಿರುವ ಯುವಕರು, ಗ್ರಾಮಸ್ಥರಿದ್ದರು.