ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಡಾ.ಡಿ.ಎನ್. ಧರಿ, ಆರ್.ಎಸ್.ಪಟ್ಟಣಶೆಟ್ಟಿ, ಸುನೀಲ ಜೈನಾಪುರ ಇದ್ದರು.  
ಜಿಲ್ಲೆ

ಯುವಶಕ್ತಿ ದೇಶಕ್ಕೆ ಪ್ರೇರಣೆ : ಡಾ.ಸಂಜಯ ಕಡ್ಲಿಮಟ್ಟಿ

ವಿಜಯಪುರ : ಪ್ರಪಂಚದ ಯಾವುದೇ ದೇಶಗಳಲ್ಲೂ ಇಲ್ಲದಷ್ಟು ಯುವಶಕ್ತಿ ನಮ್ಮ ದೇಶದಲ್ಲಿದೆ. ಆ ಯುವಶಕ್ತಿಯನ್ನು ದೇಶದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಸದುಪಯೋಗ ಮಾಡಿಕೊಳ್ಳಬಹುದು. ಅಲ್ಲದೆ, ಯುವಶಕ್ತಿಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವ ಪೀಳಿಗೆಯಲ್ಲಿರುವ ಧನಾತ್ಮಕ ಚಿಂತನೆಗಳನ್ನು ದೇಶಕ್ಕೆ ಮತ್ತು ಸಮಾಜಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳುವುದೇ ನಮ್ಮ ಉದ್ದೇಶ. ಯುವಕರಲ್ಲಿರುವ ವೈವಿದ್ಯಮಯ ಪ್ರತಿಭೆ ಮತ್ತು ಸೃಜನಶೀಲತೆ ಅಭಿವ್ಯಕ್ತಿಗೊಳಿಸಲು ಒಳ್ಳೆಯ ವೇದಿಕೆಯನ್ನು ಸೃಷ್ಠಿಸಲು ನಮ್ಮ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು.

ಉದ್ಘಾಟಕರಾಗಿ ಮಾತನಾಡಿದ ಡಾ.ಡಿ.ಎನ್. ಧರಿ, ನಮ್ಮ ರಾಷ್ಟ್ರದ ಚೇತನದಂತಿರುವ ವಿವೇಕಾನಂದರು ನಮ್ಮ ಯುವಜನಾಂಗಕ್ಕೆ ಪ್ರೇರಣೆ ಮತ್ತು ಒಂದು ಸೂತ್ರವಿದ್ದಂತೆ. ಅವರು ಯುವಶಕ್ತಿಯನ್ನು ಅರಿತವರಾಗಿದ್ದರು. ಆದ್ದರಿಂದಲೇ ಅವರು ‘ಎದ್ದೇಳಿ ಯುವಕರೆ ನಿಮ್ಮ ಗುರಿಯನ್ನು ತಲಪುವರೆಗೂ ಎಲ್ಲಿಯೂ ನಿಲ್ಲದಿರಿ’ ಎಂದು ಯುವಕರಲ್ಲಿ ಕ್ರಾಂತಿಕಾರಿ ವಿಚಾರವನ್ನು ಬಿತ್ತಿದರು. ‘ಕಣ್ಣುಗಳಲ್ಲಿ ವೈಭವದ ಕನಸು ಮನಸ್ಸಿನಲ್ಲಿ ಬಿರುಗಾಳಿಯ ವೇಗ ಇರಬೇಕು’ ಹೀಗೆ ಹೃದಯದಲ್ಲಿ ಏಳುತ್ತಿರುವ ಏರಿಳಿತಗಳು, ಪರಿವರ್ತನೆಯ ದಾಹ, ಅದಮ್ಯ ಸಾಹಸ, ಸ್ಪಷ್ಟ ಸಂಕಲ್ಪಗೈಯ್ಯುವಂತೆ ಯುಜನತೆಯಲ್ಲಿ ಹುರಿದುಂಬಿಸುತ್ತಿದ್ದರು ಎಂದರು.

ಉಪನ್ಯಾಸಕರಾಗಿ ಮಾತನಾಡಿದ ಆರ್.ಎಸ್.ಪಟ್ಟಣಶೆಟ್ಟಿ, ಸ್ವಾಮಿ ವಿವೇಕಾನಂದರು ರಾಷ್ಟ್ರನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದೆಂದು ತಿಳಿದಿದ್ದರು. ಅವರು ಒಂದು ವೇಳೆ ನಮ್ಮ ಯುವಕರು ತಮ್ಮ ಅಂತಃಶಕ್ತಿಯನ್ನು ದೇಶದ ಪ್ರಗತಿಗಾಗಿ ವಿನಿಯೋಗಿಸಿದ್ದಲ್ಲಿ ನಮ್ಮ ರಾಷ್ಟ್ರವು ಅತ್ಯಂತ ಉನ್ನತಿಯತ್ತ ಸಾಗಬಹುದು. ಯುವಕರು ನಮ್ಮ ದೇಶದ ವರ್ತಮಾನ ಹಾಗೂ ಭವಿಷ್ಯವನ್ನು ನಿರ್ಧರಿಸುವವರು. ವಿಶ್ವದಲ್ಲಿ ನಡೆದಂತಹ ಎಲ್ಲಾ ಮಹತ್ವಪೂರ್ಣ ಬದಲಾವಣೆಗಳು ಯುವಜನರ ಆಸ್ಥೆ ಹಾಗೂ ಬಲಿದಾನಗಳಿಂದಲೇ ಸಾಧ್ಯವಾದಂಥವು. ನಮ್ಮ ಯುವಶಕ್ತಿಯು ದೇಶದ ಅದೃಷ್ಟ ಹಾಗೂ ಅದರ ಚಿತ್ರವನ್ನೇ ಬದಲಾಯಿಸಬಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತ ಯುವ ವೇದಿಕೆ ಚಾರಿಟೇಬಲ್​ ಫೌಂಡೇಶನ್ ಅಧ್ಯಕ್ಷ ಸುನೀಲ ರಾ.ಜೈನಾಪುರ ಮಾತನಾಡಿದರು. ಜಗದೀಶ ಮನಗೂಳಿ, ಶ್ರೀಕಾಂತ ಪೂಜಾರಿ, ಮಹಾಂತೇಶ ಅವಟಿ, ರಮೇಶ ಗುಗ್ಗರಿ, ಎ.ವಿ.ಎಸ್. ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.