ಜಿಲ್ಲೆ

ದೇಶಕ್ಕೆ ಯುವ ಜನರೇ ಬವಿಷ್ಯದ ಶಕ್ತಿ

ಬೆಳಗಾವಿ : ಇಂದು ಪ್ರತಿಕ್ಷೇತ್ರದಲ್ಲಿಯೂ ಗಮನಾರ್ಹ ಪಾತ್ರ ನಿರ್ವಹಿಸುತ್ತಿರುವ ಯುವಜನತೆ ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನೇ ಬದಲಾಯಿಸಬಹುದಾಗಿದ್ದು ಯುವಜನತೆಯೇ ನಮ್ಮ ದೇಶದ ಶಕ್ತಿ ಮತ್ತು ಭವಿಷ್ಯ ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ, ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಟಿಯು ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಅಂದಾಗ ಮಾತ್ರ ಪ್ರಜಾಪ್ರಭುತ್ವದಲ್ಲಿ ಅತ್ಯುತ್ತಮ ಸರ್ಕಾರ ರಚನೆಗೊಂಡು ಉತ್ತಮ ಆಡಳಿತ ನೀಡಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿಯವರು ಯುವಜನತೆ ಬಗ್ಗೆ ಉನ್ನತ ಕನಸು ಹಾಗೂ ಅಪಾರ ಯುವ ಪ್ರತಿಭಾವಂತರ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಕನಸು ಮತ್ತು ವಿಶ್ವಾಸಕ್ಕೆ ನೀವು ಶಕ್ತಿ ತುಂಬಿ ಸಾಕಾರಗೊಳಿಸಬೇಕು ಎಂದರು.
ಯುವಜನತೆ ತಮ್ಮ ವೃತ್ತಿಪರ ಕೌಶಲಗಳನ್ನು ಮೈಗೂಡಿಸಿಕೊಳ್ಳುವುದರ ಜತೆಗೆ ಅವುಗಳನ್ನು ದೇಶಕ್ಕಾಗಿ ಸಮರ್ಪಣಾ ಮನೋಭಾವದಿಂದ ಒಗ್ಗೂಡಿಸಿದಾಗ ಅತ್ಯುತ್ತಮ ಅಭಿವೃದ್ದಿ ಸಾಧ್ಯವಾಗುತ್ತದೆ. ಹೇಗೆ ತಾವು ಇಂಜಿನಿಯರ್ ಆಗಬೇಕೆಂದುಕೊಂಡು ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತೀರೋ ಹಾಗೇಯೇ ದೇಶೋದ್ದಾರದ ಸಾಧನೆ ಮಾಡಬೇಕು ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಮಾತನಾಡಿ, ಈ ದೇಶದ ಮೂಲ ಶಕ್ತಿ ನಮ್ಮ ಯುವಜನತೆಯಾಗಿದ್ದು, ದೇಶವನ್ನು ಬದಲಾಯಿಸುವ ಶಕ್ತಿ ಅವರಿಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಕಾರಣಕ್ಕೂ ತಪ್ಪದೇ ಮತಚಲಾಯಿಸಬೇಕು. ‘ನಮ್ಮ ಮತ ನಮ್ಮ ಹಕ್ಕು’ ಎಂದು ತಾವೂ ಮತದಾನ ಮಾಡುವುದಲ್ಲದೇ, ನೆರೆಹೊರೆ ಹಾಗೂ ಸ್ನೇಹಿತರನ್ನೂ ಮತದಾನಕ್ಕೆ ಪ್ರೇರೇಪಿಸಬೇಕು ಎಂದರು.
 ರಾಷ್ಟ್ರಾದ್ಯಂತ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಿ ಉತ್ತಮ ದೇಶ ಕಟ್ಟಲು ಯುವಜನತೆಯನ್ನು  ಪ್ರೋತ್ಸಾಹಿಸಲಾಗುತ್ತಿದೆ. ಪೋಷಕರು, ಅಧ್ಯಾಪಕರ ಆಸೆಯಂತೆ ಒಳ್ಳೆಯ ವಿದ್ಯಾವಂತರಾಗಿ, ರಾಷ್ಟ್ರಭಕ್ತಿ ಬೆಳೆಸಿಕೊಂಡು ದೇಶಕ್ಕೆ ಉತ್ತಮ ಆಸ್ತಿಯಾಗಬೇಕು ಎಂದು ಹೇಳಿದರು.
 ವಿಟಿಯು ಕುಲಸಚಿವ ಬಿ.ಇ.ರಂಗಸ್ವಾಮಿ, ಎನ್‌ಎಸ್‌ಎಸ್ ಅಧಿಕಾರಿ ಡಾ.ಪಿ.ಪುಟ್ಟಸ್ವಾಮಿ, ಡಾ.ಎಸ್.ಎಂ.ಪೋರಾಪುರ ಹಾಗೂ ನಿಖಿಲೇಶ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಮಲ್ಲೆಶ ಚೌಗಲೆ, ಭರತ ಕಲಾಚಂದ್ರ, ನೆಹರು ಯುವ ಕೇಂದ್ರದ ಮಲ್ಲಯ್ಯ ಕರಡಿ ಸೇರಿದಂತೆ ಇತರರಿದ್ದರು.