ಶಿವಮೊಗ್ಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಲ್ಪಿತ ಯುವ ಸಂಸತ್ ಸ್ಪರ್ಧೆಯ ಪ್ರೌಢಶಾಲೆ ಮತ್ತು ಪಿಯು ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಬಲ್ಕಿಷ್ ಬಾನು, ಡಾ. ಧನಂಜಯ ಸರ್ಜಿ, ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ್, ಎನ್.ಹೇಮಂತ್, ಎನ್.ರಮೇಶ್ ಇತರರಿದ್ದರು. 
ಜಿಲ್ಲೆ

ಯುವ ಅಣಕು ಸಂಸತ್‌ ಸ್ಪರ್ಧೆ, ಮಹಮ್ಮದ್ ರಫೀಕ್, ಮೋಕ್ಷಿತ್ ಫಸ್ಟ್

ಶಿವಮೊಗ್ಗ: ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಶಿವಮೊಗ್ಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರ್ಯ ಪಿಯು ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಯುವ ಅಣಕು ಸಂಸತ್‌ನ ಪ್ರೌಢಶಾಲಾ ವಿಭಾಗದಲ್ಲಿ ಗದಗ ಜಿಲ್ಲೆ ಹಡ್ಡಳ್ಳಿಯ ಸರ್ಕಾರಿ ಶಾಲೆಯ ಎನ್.ಆರ್.ಮಹಮ್ಮದ್ ರಫೀಕ್ ಹಾಗೂ ಪಿಯು ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇಕ್ರೆಡ್ ಹಾರ್ಟ್ ಕಾಲೇಜಿನ ಮೋಕ್ಷಿತ್ ಎಸ್. ಬಂಗೇರಾ ಪ್ರಥಮ ಸ್ಥಾನ ಪಡೆದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕಲ್ಪಿತ ಯುವ ಸಂಸತ್ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಮಹಮ್ಮದ್ ರಫೀಕ್ ವಾಕ್ಚಾತುರ್ಯ ಸಾಬೀತುಪಡಿಸಿದರು. ಉತ್ತರ ಕನ್ನಡ ಜಿಲ್ಲೆ ತೆರ್ನಬೈಲ್‌ನ ಕರ್ನಾಟಕ ಪಬ್ಲಿಕ್ ಶಾಲೆಯ ಯಾಮಿನಿ ಭಾಸ್ಕರ್ ನಾಯ್ಕ ದ್ವಿತೀಯ ಮತ್ತು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳಿಯ ಎಂಡಿಆರ್ ಶಾಲೆಯ ಐಶ್ವರ್ಯಾ ಕಾನತ್ತಿ ತೃತೀಯ ಬಹುಮಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರು.

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಸರ್ಕಾರಿ ಶಾಲೆಯ ಸುಬ್ರಹ್ಮಣ್ಯ ಹೊನ್ನಪ್ಪಗೌಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸಾಣೂರು ಸರ್ಕಾರಿ ಶಾಲೆಯ ವಿಧಿತಾ ಪೂಜಾರಿ, ಬೈಂದೂರು ತಾಲೂಕಿನ ಉಪ್ಪುಂದ ಸರ್ಕಾರಿ ಶಾಲೆ ವರಪ್ರಸಾದ್, ಧಾರವಾಡ ಜಿಲ್ಲೆ ಗುಂಡಗೋಡಿ ಸರ್ಕಾರಿ ಶಾಲೆಯ ಅನ್ನಪೂರ್ಣ, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತುಂಬಾರಗುಡ್ಡೆ ಸರ್ಕಾರಿ ಶಾಲೆಯ ಅರ್ಪಿತಾ, ಬೆಂಗಳೂರು ದಕ್ಷಿಣ ಜಿಲ್ಲೆ ದೊಡ್ಡಬನಹಳ್ಳಿ ಸರ್ಕಾರಿ ಶಾಲೆಯ ಎಸ್.ಅಂಜಲಿ ಹಾಗೂ ಕೋಲಾರ ಜಿಲ್ಲೆ ಬಂಗಾರಪೇಟೆ ಸರ್ಕಾರಿ ಶಾಲೆಯ ಭರತ್ ಸಿಂಗ್ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದರು.

ಇಶಾನ್ ದ್ವಿತೀಯ, ವರಲಕ್ಷ್ಮೀ ತೃತೀಯ

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದಿದ್ದ ಪಿಯು ವಿಭಾಗದಲ್ಲಿ ಮೋಕ್ಷಿತ್ ಬಂಗೇರಾ ಪ್ರಥಮ ಬಹುಮಾನ ಪಡೆದರೆ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಇಶಾನ್ ದ್ವಿತೀಯ ಮತ್ತು ಉಡುಪಿ ಜಿಲ್ಲೆ ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿನ ವರಲಕ್ಷ್ಮೀ ತೃತೀಯ ಬಹುಮಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರು. ಬೆಳಗಾವಿ ಜಿಲ್ಲೆ ಬೈಳಹೊಂಗಲ ಸರ್ಕಾರಿ ಜೂನಿಯರ್ ಕಾಲೇಜಿನ ರಾಜೇಶ್ ಬಸವರಾಜ ಅಂಬರಶೆಟ್ಟಿ, ಹಾಸನ ಜ್ಲಿಲೆ ಹಗೇರೆ ಸರ್ಕಾರಿ ಜ್ಯೂನಿಯರ್ ಕಾಲೇಜಿನ ವಿ.ಪಿ.ಗಣೇಶ್, ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕುಮದ್ವತಿ ಕಾಲೇಜಿನ ಬಿ.ಆರ್.ಮೇಘನಾ, ಶಿವಮೊಗ್ಗ ಅರಬಿಂದೋ ಕಾಲೇಜಿನ ಡಿ.ಪ್ರಜ್ವಲ್, ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಆರ್ಯ ವಿಜಯಕುಮಾರ್, ಬೆಂಗಳೂರು ದಕ್ಷಿಣದ ಜಿಲ್ಲೆ ಕ್ರೈಸ್ಟ್ ಕಾಲೇಜಿನ ಪೂರ್ಣತೇಜಸ್ ಹಾಗೂ ಹಾಸನ ಜಿಲ್ಲೆ ದೊಡ್ಡಮಗ್ಗೆ ಸರ್ಕಾರಿ ಜೂನಿಯರ್ ಕಾಲೇಜಿನ ವರ್ಷ ಸಮಾಧಾನಕರ ಬಹುಮಾನ ಪಡೆದರು.