ರಾಣೆಬೆನ್ನೂರ: ಮುಸ್ಲಿಂ ಯುವಕನೊಬ್ಬ ಅಪ್ರಾಪ್ತಳನ್ನು ಅಪಹರಣ ಮಾಡಿಕೊಂಡು ಹೋಗಿದ್ದು, ಈ ಕುರಿತು ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲೂಕಿನ ಸಣ್ಣಸಂಗಾಪುರ ಗ್ರಾಮದ ಸೈಯದ್ ಇಮಾಮಸಾಬ ನಡುವಿನಮನಿ ಅಪ್ರಾಪ್ತಳನ್ನು ಅಪಹರಿಸಿದ ಆರೋಪಿ. ಈ ಕುರಿತು ಮದರಸಾಬ ಫಕ್ಕೀರಸಾಬ ನಡುವಿನಮನಿ, ಶಿವಪುತ್ರಪ್ಪ ದ್ಯಾಮಪ್ಪ ಮಲ್ಲಾಡದ, ರಾಜು ದೊಡ್ಡಮನಿ, ಇಮಾಮಸಾಬ ಪಕ್ಕೀರಸಾಬ ನಡುವಿನಮನಿ, ದಿಸ್ನಬ್ ಫಕ್ಕೀರಸಾಬ ನಡುವಿನಮನಿ, ಷಣ್ಮುಖಯ್ಯ ಶೇಖರಯ್ಯ ದೇವರಮನಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಕುರಿತು ಅಪ್ರಾಪ್ತಳ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಸೈಯದ್ ಸೆ. 21ರಂದು ತಾಲೂಕಿನ ಮೆಣಸಿನಹಾಳ ಬಸ್ ನಿಲ್ದಾಣದಿಂದ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿದ್ದಾನೆ. ಈ ಬಗ್ಗೆ ದೂರು ನೀಡದೆ ಪೊಲೀಸ್ ಠಾಣೆಗೆ ಹೋಗುತ್ತಿದ್ದ ಸಮಯದಲ್ಲಿ ಉಳಿದ ಆರೋಪಿಗಳು ನನ್ನನ್ನು ತಡೆದು ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು. ಆದ್ದರಿಂದ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.