ವಿಜಯಪುರ: ಚಲಿಸುವ ಬಸ್ನ ಹಿಂಬದಿ ಚಕ್ರದಡಿ ಸಿಲುಕಿ ಯುವಕನೋರ್ವನೋರ್ವ ಅಸುನೀಗಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಯುವಕನ ಸಾವು ಆತಂಕದ ಜೊತೆಗೆ ಅಚ್ಚರಿಗೆ ಕಾರಣವಾಗಿದೆ.
ವಿಜಯಪುರ ನಗರದಲ್ಲಿರುವ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಮೃತರು ಹಾಸನ ಮೂಲದವರು ಎಂದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಬದಿ ಫೋನಿನಲ್ಲಿ ಮಾತನಾಡುತ್ತ ನಿಂತಿರುವ ಯುವಕ ಬಸ್ ಬರುತ್ತಿದ್ದಂತೆ ಏಕಾಏಕಿ ತನ್ನ ಕೈಯಲ್ಲಿದ್ದ ಮೊಬೈಲ್ ಎಸೆದು ಹಿಂಬದಿ ಚಕ್ರದಡಿ ಬಿದ್ದಿದ್ದಾನೆ. ತಲೆ ಮೇಲೆ ಚಕ್ರ ಹರಿದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಯುವಕ ಹಿಂದಿನ ಚಕ್ರಕ್ಕೆ ತಲೆ ಕೊಟ್ಟಿದ್ಧಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸ್ಥಳದಲ್ಲಿ ಯುವಕನ ಮೊಬೈಲ್ ಪತ್ತೆಯಾಗಿದ್ದು, ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಸಂಚಾರಿ ಠಾಣೆ ಪೊಲೀಸರು ಮೃತ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.