ಜಿಲ್ಲೆ

ಕಾವೇರಿ ಸಮಸ್ಯೆ ನಿವಾರಿಸಲು ವಿಘ್ನೇಶ್ವರನಿಗೆ ಪೂಜೆ: ಯೂತ್ ಗ್ರೂಪ್‌ನಿಂದ ಮಣ್ಣಿನ ಗಣಪ ತಯಾರಿಸಿ ಪ್ರಾರ್ಥನೆ

ಮಂಡ್ಯ: ಕಾವೇರಿ ನದಿ ನೀರು ಸಂಕಷ್ಟವನ್ನು ನಿವಾರಿಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಯೂತ್ ಗ್ರೂಪ್ ಪದಾಧಿಕಾರಿಗಳು ಶನಿವಾರ ಗಣಪತಿ ಪೂಜೆ ಸಲ್ಲಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಗರದ ಹೊಸಹಳ್ಳಿ ವೃತ್ತದ ಬಳಿ ಮಣ್ಣಿನ ಗಣೇಶನನ್ನು ಸ್ಥಳದಲ್ಲೇ ತಯಾರಿಸಿ ಪೂಜೆ ಸಲ್ಲಿಸಿ ಕಾವೇರಿ ನದಿ ನೀರಿನ ಸಂಕಷ್ಟದಿಂದ ಮುಕ್ತಿ ದೊರಕಿಸುವಂತೆ ಪ್ರಾರ್ಥಿಸಿದರು. ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಮಾತನಾಡಿ, ಕಾವೇರಿ ನೀರಿನ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುತ್ತಿಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ ಪರಿಸ್ಥಿತಿಯನ್ನು ಅವಲೋಕಿಸದೆ ಆದೇಶ ಹೊರಹಾಕುತ್ತಿದೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ರಾಜ್ಯದ ಜನರು ನ್ಯಾಯಕ್ಕಾಗಿ ಯಾರ ಮೊರೆ ಹೋಗುವುದು ಎನ್ನುವುದೇ ಪ್ರಶ್ನೆಯಾಗಿದೆ ಎಂದರು.

ತಮಿಳುನಾಡು ಇಡುತ್ತಿರುವ ನೀರಿನ ಬೇಡಿಕೆಯನ್ನು ಪುರಸ್ಕರಿಸುತ್ತಲೇ ಬರುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಮಳೆ ಇಲ್ಲದೆ, ಜಲಾಶಯಗಳು ಭರ್ತಿಯಾಗದೆ ರಾಜ್ಯದ ರೈತರು, ಜನರು ಅನುಭವಿಸುತ್ತಿರುವ ಸಂಕಷ್ಟವನ್ನು ಪರಿಗಣಿಸುತ್ತಲೇ ಇಲ್ಲ. ರಾಜ್ಯ ಸರ್ಕಾರ ಅಧಿಕಾರ ಉಳಿವಿಗಾಗಿ ಸಮಿತಿಯ ಆದೇಶ ಪಾಲನೆ ಮಾಡುತ್ತಿದೆ. ಸಮಿತಿ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಆದೇಶ ನೀಡುತ್ತಾ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯವನ್ನು ಕತ್ತಲಲ್ಲಿರಿಸಿದೆ. ಕತ್ತಲ ನ್ಯಾಯದ ವಿರುದ್ಧ ಎಷ್ಟೇ ಹೋರಾಟಗಳು ನಡೆಸಲಾಗುತ್ತಿದ್ದರೂ ನ್ಯಾಯ ಸಿಗುವ ಲಕ್ಷಣಗಳು ಕಾಣಿಸುತ್ತಲೇ ಇಲ್ಲ. ಹಾಗಾಗಿ ಸಂಕಷ್ಟಗಳನ್ನು ದೂರ ಮಾಡುವ ನಂಬಿಕೆಯನ್ನು ಹೊಂದಿರುವ ಶ್ರೀ ವಿನಾಯಕನಿಗೆ ಮೊರೆ ಹೋಗುವುದು ನಮಗೆಲ್ಲರಿಗೂ ಅನಿವಾರ್ಯವಾಗಿದೆ ಎಂದರು.

ಗ್ರೂಪ್‌ನ ದರ್ಶನ್, ರಾಜಣ್ಣ, ಪವನ್, ನವೀನ್, ಸೀನಪ್ಪ, ಹರ್ಷದ್, ಸೈಯದ್ ಇತರರಿದ್ದರು.