ಜಿಲ್ಲೆ

ಜಲಾಶಯದಲ್ಲಿ ಸಾಹಸ ಮೆರೆಯಲು ಹೋದ, ಜಾರಿ ಬಿದ್ದು ಆಸ್ಪತ್ರೆ ಸೇರಿದ...

ಚಿಕ್ಕಬಳ್ಳಾಪುರ: ಹುಡುಗಾಟಿಕೆಯಿಂದಲೋ ಅಥವಾ ಇನ್ಯಾರನ್ನೋ ಮೆಚ್ಚಿಸಲೋ ನಾನಾ ಸಾಹಸ ಮಾಡುವ ಕೆಲವು ಯುವಕರ ಸಾಲಿಗೆ ಈತನೂ ಸೇರಿದ್ದಾನೆ. ಮಾತ್ರವಲ್ಲ, ಈಗ ನೋವನುಭವಿಸುವ ಜತೆಗೆ ನಗೆಪಾಟಲಿಗೂ ಒಳಗಾಗುವಂಥ ಪರಿಸ್ಥಿತಿಗೆ ತಲುಪಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಯುವಕನೊಬ್ಬ ಇಂಥ ಹುಚ್ಚಾಟಕ್ಕೆ ಮುಂದಾಗಿ ಫಜೀತಿಗೆ ಸಿಲುಕಿದ್ದಾನೆ. ಆತ ಸಾಹಸ ಮಾಡಲು ಹೋದ ಜಾಗ ಬೇರಾವುದೂ ಅಲ್ಲ, ಜಲಾಶಯ. ಹೌದು.. ಶ್ರೀನಿವಾಸಸಾಗರ ಜಲಾಶಯದಲ್ಲಿ ಸಾಹಸ ಮಾಡಲು ಹೋಗಿ ಈತ ಎಡವಟ್ಟು ಮಾಡಿಕೊಂಡಿದ್ದಾನೆ.

ಈತ ಜಲಾಶಯವನ್ನು ಏರಲು ಹೋಗಿ ಅರ್ಧದವರೆಗೆ ತಲುಪಿದ್ದ. ಬಳಿಕ ಅಲ್ಲಿಂದ ದಿಢೀರ್ ಜಾರಿ ಬಿದ್ದಿದ್ದಾನೆ. ಹೀಗೆ ಈತ ಜಾರಿ ಬೀಳುವ ದೃಶ್ಯ ಸಾರ್ವಜನಿಕರ ಮೊಬೈಲ್​ಫೋನ್​ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಲಾರಂಭಿಸಿದೆ. ಯುವಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ. ಯುವಕನ ಹೆಸರು ಇತ್ಯಾದಿ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.