ಜಿಲ್ಲೆ

ಕಾವೇರಿ ನದಿಯಲ್ಲಿ ಮುಳುಗಿ ಯುವಕ ಮೃತ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ಸ್ನೇಹಿತರೊಟ್ಟಿಗೆ ಈಜಲು ತೆರಳಿದ್ದ ಯುವಕ ಸತ್ತೇಗಾಲ ಸಮೀಪದ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಬೋಗಲಗುಂಟೆ ನಿವಾಸಿ ಹನುಮಂತರಾಯ ಅವರ ಪುತ್ರ ಪ್ರೇಮ್‌ಕುಮಾರ್ (20) ಮೃತರು. ಈತ ಮೂಲತಃ ತಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿವಾಸಿಯಾಗಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಿದ್ದರು. ಮೇ 11 ರಂದು ಮನೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗಿಬರುವುದಾಗಿ ಹೇಳಿ ಹೋಗಿದ್ದ.

ದೇವರ ದರ್ಶನ, ಪೂಜೆ ಮುಗಿಸಿಕೊಂಡು ಮೇ 13 ರಂದು ಊರಿಗೆ ಮರಳುವಾಗ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸಮೀಪದ ವೆಸ್ಲಿ ಬ್ರಿಡ್ಜ್ ಬಳಿ ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಮೇ 15ರಂದು ಪ್ರೇಮ್‌ಕುಮಾರ್ ಮೃತದೇಹ ದೊರೆತಿದ್ದು, ಮೃತನ ತಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.