ಜಿಲ್ಲೆ

ಅವ್ವೇರಹಳ್ಳಿ ಗ್ರಾಮದ ಸಮೀಪ ನಾಲೆಗೆ ಕಾರು ಉರುಳಿ ಬಿದ್ದು ಯುವಕ ಸಾವು: ಮತ್ತೊಬ್ಬರಿಗೆ ತೀವ್ರವಾಗಿ ಗಾಯ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪಾಂಡವಪುರ ತಾಲೂಕು ಬ್ಯಾಡರಹಳ್ಳಿ ಗ್ರಾಮದ ನಂದೀಶ್(18) ಮೃತರು. ಯೋಗಾನಂದ (20) ಗಾಯಗೊಂಡಿದ್ದು, ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲಿಯೂರು ಕಡೆಯಿಂದ ಬ್ಯಾಡರಹಳ್ಳಿ ಗ್ರಾಮಕ್ಕೆ ಬೆಳಗ್ಗೆ 9.30ರಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಸುಮಾರು 25 ಅಡಿ ಆಳದ ನಾಲೆಗೆ ಉರುಳಿ ಬಿದ್ದಿದೆ. ಈ ಘಟನೆಯಿಂದ ನಂದೀಶ್ ಸ್ಥಳದಲ್ಲೇ ಮೃತಪಟ್ಟರೆ, ಯೋಗಾನಂದ ತೀವ್ರವಾಗಿ ಗಾಯಗೊಂಡರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು, ಜೆಸಿಬಿ ಮೂಲಕ ಕಾರನ್ನು ಮೇಲೆತ್ತಿ ಗಾಯಾಳು ಯೋಗಾನಂದ ಅವರನ್ನು ಮಿಮ್ಸ್‌ಗೆ ದಾಖಲಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.