ಜಿಲ್ಲೆ

ಗೂಡ್ಸ್ ವಾಹನ ಡಿಕ್ಕಿ ಹೊಡೆದು ಯುವಕ ಸಾವು

ಪಿರಿಯಾಪಟ್ಟಣ: ಬೈಕ್ ಚಲಾಯಿಸುವ ವೇಳೆ ರಸ್ತೆಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮುಂದಾದ ಯುವಕನಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲೂಕಿನ ಕಂದೇಗಾಲ ಗ್ರಾಮದ ಅಣ್ಣೇಗೌಡರ ಪುತ್ರ ಸುರೇಶ್(28) ಮೃತ ಯುವಕ. ಶುಕ್ರವಾರ ಸಂಜೆ 4.30ರ ಸಮಯದಲ್ಲಿ ಕಂದೇಗಾಲ ಗ್ರಾಮದಿಂದ ಬೈಕ್‌ನಲ್ಲಿ ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ ಕುಶಾಲನಗರ ರಸ್ತೆಯಲ್ಲಿರುವ ಚೌಡೇನಹಳ್ಳಿ ಕೆರೆ ಬಳಿ ಜೇಬಿನಲ್ಲಿದ್ದ ಮೊಬೈಲ್ ಜಾರಿ ರಸ್ತೆಗೆ ಬಿದ್ದಿದೆ. ಕೂಡಲೇ ಬೈಕ್ ಅನ್ನು ರಸ್ತೆ ಬದಿಗೆ ನಿಲ್ಲಿಸಿ ರಸ್ತೆಯ ಮಧ್ಯಭಾಗದಲ್ಲಿ ಮೊಬೈಲ್ ತೆಗೆದುಕೊಳ್ಳಲು ಮುಂದಾದ ವೇಳೆ ಪಿರಿಯಾಪಟ್ಟಣದಿಂದ ಕುಶಾಲನಗರದ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನ ಸುರೇಶ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಿರಿಯಾಪಟ್ಟಣ ಪೊಲೀಸರು ಗೂಡ್ಸ್ ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.