ಶಿವಮೊಗ್ಗ: ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿ ಸಲ್ಲಿಸಿರುವುದನ್ನು ಖಂಡಿಸಿ ಬುಧವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬಿಜೆಪಿ ಸಂಸದರ ನಿವಾಸ ಹಾಗೂ ಮುಖ್ಯ ಅಂಚೆ ಕಚೇರಿಗೆ ಪ್ರತ್ಯೇಕವಾಗಿ ಮುತ್ತಿಗೆ ಹಾಕಲು ಯತ್ನಿಸಿದರು.
ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಾಲರಾಜ ಅರಸ್ ರಸ್ತೆಯ ಮುಖ್ಯ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸಿದರು.
ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿರಂತರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದ್ವೇಷದ ರಾಜಕಾರಣ ನಡೆಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಇ.ಡಿ ಸಂಸ್ಥೆ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಬೆದರಿಸುವ ಕಾರ್ಯ ನಡೆಸುತ್ತಿದೆ. ತಕ್ಷಣವೇ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕು. ಸಾಂವಿಧಾನಿಕ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ವಿಜಯಕುಮಾರ್, ಕೆ.ಚೇತನ್, ಸಿ.ಜೆ.ಮಧುಸೂಧನ್, ಇಮ್ರಾನ್, ಅಕ್ಬರ್, ಯುವ ಕಾಂಗ್ರೆಸ್ ಮುಖಂಡರಾದ ಹರ್ಷಿತ್ ಗೌಡ, ಚರಣ್, ಪ್ರವೀಣ್, ಗಿರೀಶ್, ಸಕ್ಲೇನ್, ಅನಿಲ್ ಪಾಟೀಲ್, ಧನುಷ್, ಶಿವು, ಆಕಾಶ್, ಎನ್‌ಎಸ್‌ಯುಐ ಮುಖಂಡರಾದ ವಿಜಯ್, ರವಿ ತಟ್ಟಿಕೆರೆ, ಚಂದ್ರೋಜಿ ರಾವ್, ಸುಬಾನ್, ಅಭಿ, ಆದಿತ್ಯ, ವರುಣ್ ಪ್ರತಿಭಟನೆಯಲ್ಲಿದ್ದರು.
ಸಂಸದರ ನಿವಾಸಕ್ಕೆ ಮುತ್ತಿಗೆ
ಮತ್ತೊಂದೆಡೆ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಸೇಡಿನ ರಾಜಕಾರಣ ಮಾಡುತ್ತಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ಸೇಡಿನ ರಾಜಕಾರಣ ಎಂದು ಕಿಡಿಕಾರಿದರು. ಮುಖಂಡರಾದ ಕೆ.ರಂಗನಾಥ್, ಎಚ್.ಪಿ.ಗಿರೀಶ್, ಎಂ.ಪ್ರವೀಣ್‌ಕುಮಾರ್, ಎಸ್.ಎಂ.ಶರತ್, ಎಂ.ರಾಹುಲ್, ಎಸ್.ಬಸವರಾಜ್, ಕವಿತಾ, ಕೆ.ಎಲ್.ಪವನ್, ಎಂ.ರಾಕೇಶ್, ರಾಜೇಶ್ ಮಂದಾರ ಇತರರಿದ್ದರು.