ಜಿಲ್ಲೆ

ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಹುಬ್ಬಳ್ಳಿ: ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಮಹಾನಗರ ಯುವ ಕಾಂಗ್ರೆಸ್ ವತಿಯಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಯಿತು.

ಹು-ಧಾ ಮಹಾನಗರ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರ್ಜುನ ಪಾಟೀಲ ಮಾತನಾಡಿ, ಮೂರ‌್ನಾಲ್ಕು ತಿಂಗಳಿಂದ ಅನಿಯಮಿತವಾಗಿ ಮಳೆ ಸುರಿಯುತ್ತಿದೆ. ಬಿತ್ತನೆ ಮಾಡಿರುವ ಬೆಳೆಗೆ ರಸಗೊಬ್ಬರದ ಅಗತ್ಯವಿದೆ. ಆದರೆ, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ. ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ತಕ್ಷಣವೇ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಮಿನಿ ವಿಧಾನ ಸೌಧಕ್ಕೆ ತೆರಳಿ ಶಹರ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಮನವಿ ರವಾನಿಸಲಾಯಿತು.

ಉಪಾಧ್ಯಕ್ಷ ಕಾಸಿಂ ಕುಡಲಗಿ, ಪ್ರಮುಖರಾದ ಶೀತಲ್ ಮಾದಪಟಿ, ಪ್ರೇಮನಾಥ ಚಿಕ್ಕತುಂಬಳ, ಹನೀಫ್, ಆಕಾಶ ಕೋನರ, ಶುಜೌದ್ದೀನ್ ವಾಚ್‌ಮೇಕರ್, ಶಾನು ಖಾನ್, ಪ್ರೇಮ್ ಜಾಧವ, ರಾಹುಲ್ ಉಪ್ಪಳದೊಡ್ಡಿ, ಜೋಯೆಲ್, ಇತರರು ಇದ್ದರು.