ಆಲೂರು: ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಡೆ ಸರಿಯಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ನ ಯುವ ಘಟಕದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೊನೆಪೇಟೆಯಿಂದ ಪೋಸ್ಟ್ ಆಫೀಸ್‌ವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಕಾರ್ಯಕರ್ತರು, ದಾರಿಯುದ್ದಕ್ಕೂ ಕೇಂದ್ರ ಸರ್ಕಾರದ ಧೋರಣೆ ಹಾಗೂ ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ಯುವ ಘಟಕದ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ಮಾತನಾಡಿ, ಕೇಂದ್ರ ಸರ್ಕಾರ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡುವ ಮೂಲಕ ಬಡವರು ಮಹಿಳೆಯರಿಗೆ ಮೋಸ ಮಾಡಿದೆ. ಅಚ್ಛೇ ದಿನ್ ಬರಲಿದೆ ಎಂದು ಹೇಳಿ ಜನರಿಗೆ ಟೋಪಿ ಹಾಕುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.
ತಾಲೂಕು ಅಧ್ಯಕ್ಷ ಮಾತನಾಡಿ ಚಂದ್ರಶೇಖರ್ ಮಾತನಾಡಿ, ಬೆಲೆ ಏರಿಕೆ ಹೊರೆಯಿಂದ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಿರುವಾಗ ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ನಡೆಸಲು ಬಿಜೆಪಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡುವ ಮೂಲಕ ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದರು.
ಐಎನ್‌ಟಿಸಿ ಯುತ್ ಘಟಕದ ತಾಲೂಕು ಅಧ್ಯಕ್ಷ ರಾಜಶೇಖರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಯುವ ಘಟಕದ ಉಪಾಧ್ಯಕ್ಷ ಮನು, ಪ್ರಧಾನ ಕಾರ್ಯದರ್ಶಿಡಳಾದ ದರ್ಶನ, ವಿವೇಕ್, ಕಾರ್ಯದರ್ಶಿ ಮೋಹಿನ್, ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಖಾಲಿದ್ ಪಾಷಾ, ಹುಣಸುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇತರರು ಹಾಜರಿದ್ದರು.