ಮೂಡಲಗಿ: ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕಾ ಕ್ಷೇತ್ರಕ್ಕೆ ಒದಗಿಸಿ ಆ ಮೂಲಕ ಕೈಗಾರಿಕಾ ಸಂಸ್ಥೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು ಜಿಟಿಟಿಸಿಯ ಉದ್ದೇಶವಾಗಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.
ತಾಲೂಕಿನ ಅರಬಾವಿಯ ನಾಡ ಕಚೇರಿ ಬಳಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಿಟಿಟಿಸಿ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಕರ ಭವಿಷ್ಯಕ್ಕೆ ಜಿಟಿಟಿಸಿ ಸಂಸ್ಥೆ ಉತ್ತಮ ವೇದಿಕೆಯಾಗಿದೆ. ಇದರಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದರು.
ಬೆಳಗಾವಿ, ಚಿಕ್ಕೋಡಿ ಮತ್ತು ಅರಬಾವಿ ಪಟ್ಟಣಗಳಲ್ಲಿ ಜಿಟಿಟಿಸಿ ಕೇಂದ್ರ ಆರಂಭಿಸುವ ಮೂಲಕ ಅತಿ ಹೆಚ್ಚು ಜಿಟಿಟಿಸಿ ಕೇಂದ್ರ ಹೊಂದಿರುವ ಜಿಲ್ಲೆ ಬೆಳಗಾವಿಯಾಗಿದೆ. ಇನ್ನೂ 6 ಕೇಂದ್ರ ಪ್ರಾರಂಭಿಸುವ ಸಂಕಲ್ಪ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಶಿಕ್ಷಣದಿಂದ ಪರಿವರ್ತನೆ: ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ಜಿಟಿಟಿಸಿಯಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ನೌಕರಿ ಖಚಿತ. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರದ್ದಾಗಿದೆ. ಅರಬಾವಿ ಕ್ಷೇತ್ರವನ್ನು ವಿದ್ಯಾಕಾಶಿಯನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ. 2017ರಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆಯಾಗಲು ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ, ಸತೀಶ ಜಾರಕಿಹೊಳಿ ಕಾರಣರಾಗಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದರು.
ಸಮರ್ಥ ಆಡಳಿತ: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ವರ್ಗಗಳ ಹಿತ ರಕ್ಷಣೆಗೆ ಬದ್ಧವಿದೆ. ಈ ದಿಸೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಆಗುತ್ತಿವೆ. ಬಿಜೆಪಿಯೊಂದೇ ರಾಜ್ಯದಲ್ಲಿ ಸಮರ್ಥ ಆಡಳಿತ ನೀಡಲು ಬದ್ಧವಿದೆ ಎಂದು ಬಾಲಚಂದ್ರ ಹೇಳಿದರು. ಬೆಂಗಳೂರು ಜಿಟಿಟಿಸಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಚ್.ರಾಘವೇಂದ್ರ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಡಾ. ಎಂ.ಜಿ.ಹಿರೇಮಠ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಪದ್ಮಶಾಲಿ, ಆರ್‌ಸಿಯು ರಜಿಸ್ಟ್ರಾರ್ ಚಂದ್ರಮೌಳಿ, ವಲಯ ಅಧಿಕಾರಿ ಬಿ.ಜಿ. ಮೋಗೇರ, ಗೋವಿಂದ ವತ್ಸ, ತಹಸೀಲ್ದಾರ್ ಡಿ.ಜೆ.ಮಹಾತ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ನಿಂಗಣ್ಣವರ, ಪ್ರಾಂಶುಪಾಲ ಉಮೇಶ ಬಡಕುಂದ್ರಿ ಇತರರು ಇದ್ದರು.
10 ಎಕರೆ ನಿವೇಶನದಲ್ಲಿ 28 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅರಬಾವಿಯಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಆರ್‌ಟಿಒ ಕಚೇರಿಯೂ ಕೂಡ ಇಲ್ಲಿ ಪ್ರಾರಂಭವಾಗಲಿದೆ. ಇದಕ್ಕಾಗಿ ನಿವೇಶನವನ್ನೂ ನೀಡಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದರು.
ಮರಾಠಾ ಅಭಿವೃದ್ಧಿ ನಿಗಮ ರಚನೆಯೂ ಬಹಳ ಅಗತ್ಯವಾಗಿತ್ತು. ಅವರೂ ನಮ್ಮವರೇ. ಅವರ ಅಭಿವೃದ್ಧಿಗೂ ಸರ್ಕಾರ ಕ್ರಮ ವಹಿಸಬೇಕಲ್ಲವೇ? ಈ ವಿಷಯದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವುದು ಸೂಕ್ತವಲ್ಲ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಅಪೇಕ್ಷೆಯೂ ಇದೆ. ತಕ್ಷಣವೇ ಈ ಕೆಲಸವನ್ನು ಸರ್ಕಾರ ಮಾಡಲೇಬೇಕು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಬೆಳಗಾವಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಚಿವ ರಮೇಶ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಯೋಜನೆಗಳ ಅನುಷ್ಠಾನ, ಅನುದಾನ ಇನ್ನಿತರ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ದೆಹಲಿಗೆ ಹೋಗಿರಬೇಕು. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಸರಿಯಲ್ಲ. ತಮ್ಮೊಂದಿಗೆ ಬಿಜೆಪಿ ಸೇರಿದವರ ಹಿತ ಕಾಯಲು ಅವರು ಮುಂದಾಗಿದ್ದರೆ ಅದೂ ತಪ್ಪೇನಲ್ಲ ಎಂದು ಡಿಸಿಎಂ ಡಾ. ಅಶ್ವತ್ಥನಾರಾಯಣ ಹೇಳಿದರು.