ಮೈಸೂರು: ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಯುವ ಸಂಭ್ರಮದ ಮೂರನೇ ದಿನದ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮನಮೋಹಕ ನೃತ್ಯ ರೂಪಕಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಳಿಸಿ ದರು. ಮಳೆ ಸುರಿಯುತ್ತಿದ್ದರೂ ಯುವ ಸಮೂಹ ಕಾರ್ಯಕ್ರಮವನ್ನು ಕಣ್ತುಂಬಿಕೊಂಡು, ಶಿಳ್ಳೆ ಹಾಗೂ ಚಪ್ಪಾಳೆಯ ಮೂಲಕ ನೃತ್ಯ ತಂಡಗಳನ್ನು ಹುರಿದುಂಬಿಸಿದರು.
ದೈವಗಳ ಲೀಲೆ, ದೇಶಭಕ್ತಿ, ಯೋಧರ ತ್ಯಾಗ-ಬಲಿದಾನ, ಸಂವಿಧಾನದ ಮಹತ್ವ, ಕನ್ನಡ ನಾಡಿನ ಹಿರಿಮೆ ಹಾಗೂ ಭಕ್ತಿ ಪರಂಪರೆಯನ್ನು ಬಿಂಬಿಸುವ ನೃತ್ಯಗಳು ಒಂದರ ಹಿಂದೆ ಒಂದರಂತೆ ವೇದಿಕೆಯಲ್ಲಿ ಮೂಡಿಬಂದವು. ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದಂತೆ ನೆರೆದಿದ್ದ ಯುವ ಸಮೂಹವೂ ಹಾಡಿಗೆ ಹೆಜ್ಜೆ ಹಾಕಿ, ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಕಲಾವಿದರ ಉತ್ಸಾಹ ಹೆಚ್ಚಿಸಿತು.
ಅಂಬೇಡ್ಕರ್ ಬದುಕು ಅನಾವರಣ:
ಎಚ್.ಡಿ.ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡದ ನೃತ್ಯ ರೂಪಕದೊಂದಿಗೆ ಮೂರನೇ ದಿನದ ಕಾರ್ಯಕ್ರಮ ಆರಂಭವಾಯಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ, ಹೋರಾಟ ಹಾಗೂ ಸಾಧನೆಯನ್ನು ನೃತ್ಯದ ಮೂಲಕ ತೆರೆದಿಟ್ಟ ವಿದ್ಯಾರ್ಥಿಗಳು ಗಮನ ಸೆಳೆದರು.
ಮಂಡ್ಯದ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ತಂಡ ರಾಷ್ಟ್ರಧ್ವಜದಲ್ಲಿ ಅಶೋಕಚಕ್ರ ಮೂಡಿಬಂದ ಹಿನ್ನೆಲೆಯನ್ನು ನೃತ್ಯ ರೂಪಕದ ಮೂಲಕ ಪರಿಚಯಿಸಿತು.
ಮಲೆ ಮಹದೇಶ್ವರನ ಮಹಿಮೆ:
ಕರ್ಣಗುಪ್ಪೆ ಎಸ್‌ಎನ್‌ಜಿಪಿಯು ಕಾಲೇಜು ತಂಡ ಸೋಜುಗಾದ ಸೂಜುಮಲ್ಲಿಗೆ, ಏಳು ಮಲೆ ಮೇಲೆ ಕುಂತಾನ ನಮ್ಮ ಮಾದೇವ ಸೇರಿದಂತೆ ಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಮಲೆ ಮಹದೇಶ್ವರನ ಮಹಿಮೆಯನ್ನು ತೆರೆದಿಟ್ಟಿತು. ನೃತ್ಯದ ಮೂಲಕ ಭಕ್ತಿಭಾವ ಮೂಡಿಸಿದ ವಿದ್ಯಾರ್ಥಿಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಇಲವಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡ ಶಿವ ಶಿವ ಶಂಕರ, ಜಯ ಜಯ ಶಂಕರ ಹಾಡಿಗೆ ಹೆಜ್ಜೆ ಹಾಕಿ ಶಿವನ ಮಹಿಮೆಯನ್ನು ಬಿಂಬಿಸಿತು. ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡ ಕೃಷ್ಣ ನೀ ಬೇಗನೆ ಬಾರೋ, ಗೋಪಾಲ ಬಾ ಗೋವಿಂದಾ ಬಾ ಸೇರಿದಂತೆ ಹಾಡುಗಳ ಮೂಲಕ ಶ್ರೀಕೃಷ್ಣನ ಮಹಿಮೆಯನ್ನು ನೃತ್ಯದ ಮೂಲಕ ಅನಾವರಣಗೊಳಿಸಿತು.
ಬೆಂಗಳೂರಿನ ದಕ್ಷ ಅಕಾಡೆಮಿ ಸಂಜೆ ಕಾಲೇಜು ತಂಡ ಮಹಾಕಾಳಿಯ ದರ್ಶನವನ್ನು ನೃತ್ಯ ರೂಪಕದ ಮೂಲಕ ಮಾಡಿಸಿತು. ತುರುಗನೂರು ಎನ್‌ಸಿಆರ್ ಪಿಯು ಕಾಲೇಜು ತಂಡ ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ ಹಾಡಿಗೆ ನೃತ್ಯ ಪ್ರದರ್ಶಿಸಿ ಗಣಪತಿಯ ಮಹಿಮೆಯನ್ನು ತೆರೆದಿಟ್ಟಿತು. ಎಚ್.ಡಿ.ಕೋಟೆಯ ವಿದ್ಯಾಸಿಂಚನ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ತಂಡಗಳು ಶಿವನ ಮಹಿಮೆಯನ್ನು ಬಿಂಬಿಸುವ ನೃತ್ಯ ರೂಪಕಗಳನ್ನು ಪ್ರದರ್ಶಿಸಿದವು.
ಯೋಧರ ತ್ಯಾಗಕ್ಕೆ ನಮನ:
ಮದ್ದೂರು ಕೊಪ್ಪದ ಸರ್ವೋದಯ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು ತಂಡ ಭಾರತೀಯ ಯೋಧರ ತ್ಯಾಗ, ಬಲಿದಾನ ಹಾಗೂ ದೇಶಸೇವೆಯನ್ನು ಬಿಂಬಿಸುವ ನೃತ್ಯ ರೂಪಕ ಪ್ರದರ್ಶಿಸಿ ದೇಶಭಕ್ತಿಯ ಕಿಚ್ಚು ಹೊತ್ತಿಸಿತು.
ಕನ್ನಡ ನಾಡಿನ ವೈಭವ:
ಬೆಂಗಳೂರಿನ ಮಹದೇಶ್ವರ ನಗರದ ಆಕ್ಸಫರ್ಡ್ ಬ್ರಿಡ್ಜ್ ಸ್ಕೂಲ್ ತಂಡ ಕರುನಾಡೆ ಕೈಚಾಚಿದ ನೋಡೆ... ಹಾಡಿನ ಮೂಲಕ ಕರ್ನಾಟಕದ ಹಿರಿಮೆ-ಗರಿಮೆಯನ್ನು ಸಾರಿತು. ಮಳವಳ್ಳಿಯ ಸಿದ್ದಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜು ತಂಡ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ನಾಡಿನ ಮೇಲಿನ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿತು.
ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಡೊಳ್ಳು ಕುಣಿತ ಪ್ರದರ್ಶಿಸಿ ಜಾನಪದ ಕಲೆಯ ಸೊಗಡನ್ನು ವೇದಿಕೆಯಲ್ಲಿ ಅನಾವರಣಗೊಳಿಸಿದರು.