ಕಾದಲನ್ ಚಿತ್ರದ ಮುಕ್ಕಾಲಾ ಮುಕಾಬ್ಲಾ ಲೈಲಾ, ಓ ಲೈಲಾ... ಹಾಡಿಗೆ ಹೆಜ್ಜೆ ಹಾಕಿದ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ  
ಜಿಲ್ಲೆ

ಪ್ರಭುದೇವ ಹೆಜ್ಜೆಗೆ ಯುವಜನ ಫಿದಾ!

* ಅಜನೀಶ್ ಲೋಕನಾಥ್ ಸಂಗೀತದ ಅಲೆ * ಮೊದಲ ದಿನವೇ ರಂಗೇರಿದ ಯುವ ದಸರಾ

ಮೈಸೂರು: ಒಂದೆಡೆ ಭಾರತದ ಮೈಕಲ್ ಜಾಕ್ಸನ್ ಖ್ಯಾತಿಯ ನೃತ್ಯ ನಿರ್ದೇಶಕ ಪ್ರಭುದೇವ ಅವರ ಮೋಹಕ ನೃತ್ಯ.., ಮತ್ತೊಂದೆಡೆ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತದ ಇಂಪು... ನೆಚ್ಚಿನ ಕಲಾವಿದರನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಯುವಸಮೂಹದ ಉತ್ಸಾಹ, ಚಪ್ಪಾಳೆ, ಶಿಳ್ಳೆ, ಹರ್ಷೋದ್ಗಾರಗಳ ನಡುವೆ ಉತ್ತನಹಳ್ಳಿ ಮೈದಾನದಲ್ಲಿ ಮಂಗಳವಾರ ಯುವ ದಸರಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಯುವ ದಸರಾ ಮೊದಲ ದಿನವೇ ಸಂಗೀತ ಮತ್ತು ನೃತ್ಯದ ರಸದೌತಣ ಉಣಬಡಿಸಿತು. ವೇದಿಕೆಯ ಮೇಲೆ ಕಲಾವಿದರು ತಮ್ಮ ಪ್ರತಿಭೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರೆ, ಮೈದಾನದಲ್ಲಿ ನೆರೆದಿದ್ದ ಯುವಜನರು ಪ್ರತಿ ಹಾಡಿಗೂ ಹೆಜ್ಜೆ ಹಾಕಿ, ಮೆಚ್ಚಿನ ಕಲಾವಿದರ ಪ್ರದರ್ಶನಕ್ಕೆ ಮನಸೋತರು.

ಮುಕ್ಕಾಲಾ ಮುಕಾಬ್ಲಾಗೆ ಪ್ರಭುದೇವ ಹೆಜ್ಜೆ!

ಯುವ ದಸರಾಕ್ಕೆ ಮೆರುಗು ತಂದದ್ದು ಮೈಸೂರಿನ ಮನೆಮಗ, ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಅವರ ಆಗಮನ. ಶ್ವೇತವರ್ಣದ ರೇಷ್ಮೆ ಪಂಚೆ ಮತ್ತು ಶರ್ಟ್ ಧರಿಸಿ ವೇದಿಕೆಗೆ ಆಗಮಿಸಿದ ಪ್ರಭುದೇವ ಅವರನ್ನು ಕಂಡ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು. ಎಂದಿನ ಪಾಶ್ಚಾತ್ಯ ಉಡುಪಿನ ಬದಲಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಅವರು, ಮೈಸೂರು ಮಣ್ಣಿನ ಸಂಸ್ಕೃತಿಗೆ ಗೌರವ ಸಲ್ಲಿಸಿದ ರೀತಿಯೂ ಗಮನ ಸೆಳೆಯಿತು.

ತಮ್ಮದೇ ವಿಶಿಷ್ಟ ನೃತ್ಯಶೈಲಿಯಿಂದ ಭಾರತೀಯ ಚಿತ್ರರಂಗದಲ್ಲಿ ಪ್ರತ್ಯೇಕ ಛಾಪು ಮೂಡಿಸಿರುವ ಪ್ರಭುದೇವ, ತಮ್ಮ ಜನಪ್ರಿಯ ಚಿತ್ರ ಕಾದಲನ್‌ನ ಮುಕ್ಕಾಲಾ ಮುಕಾಬ್ಲಾ ಲೈಲಾ, ಓ ಲೈಲಾ... ಹಾಡಿಗೆ ಒಂದೆರಡು ಹೆಜ್ಜೆ ಹಾಕುವ ಮೂಲಕ ಯುವ ದಸರಾಕ್ಕೆ ರಂಗಿನ ಮುನ್ನುಡಿ ಬರೆದರು. ಹಲವು ವರ್ಷಗಳ ಹಿಂದಿನ ಈ ಜನಪ್ರಿಯ ಗೀತೆಯ ನೆನಪನ್ನು ಮರುಕಳಿಸಿದ ಅವರ ನೃತ್ಯಕ್ಕೆ ಪ್ರೇಕ್ಷಕರು ಸಂಭ್ರಮದಿಂದ ಪ್ರತಿಕ್ರಿಯಿಸಿದರು.

ಬಳಿಕ ದೀಪ ಬೆಳಗಿಸುವ ಮೂಲಕ ಯುವ ದಸರಾವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಉದ್ಘಾಟನೆಯ ನಂತರವೂ ಕಾರ್ಯಕ್ರಮದೊಂದಿಗೆ ಬೆರೆತ ಪ್ರಭುದೇವ, ಅಜನೀಶ್ ಲೋಕನಾಥ್ ಅವರ ತಂಡದ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಿ ಸಂಭ್ರಮಿಸಿದರು.

ಅಜನೀಶ್ ಸಂಗೀತಕ್ಕೆ ಮಂತ್ರಮುಗ್ಧರಾದ ಯುವಜನ:

ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಕಾರ್ಯಕ್ರಮ ಯುವ ದಸರಾ ವೇದಿಕೆಗೆ ಮತ್ತಷ್ಟು ಕಳೆ ತಂದಿತು. ಗೊತ್ತಿಲ್ಲ ಶಿವನೇ ಭಕ್ತಿಯ ದಾರಿಯೂ, ಗೊತ್ತಿರುವುದೊಂದೇ ದೈವವಾರಿಯೂ... ಎಂಬ ಹಾಡಿನೊಂದಿಗೆ ವೇದಿಕೆಗೆ ಭರ್ಜರಿ ಪ್ರವೇಶ ಮಾಡಿದ ಅಜನೀಶ್ ಲೋಕನಾಥ್, ತಮ್ಮ ಸಂಗೀತದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಆರಂಭಿಸಿದರು.

ಅವರ ತಂಡದ ಸದಸ್ಯರಾದ ಜಸ್‌ಕರಣ್ ಸಿಂಗ್, ಹೇಮಂತ್ ಕುಮಾರ್ ಸೇರಿದಂತೆ ಇತರ ಗಾಯಕರು ಒಂದರ ಹಿಂದೆ ಒಂದರಂತೆ ಜನಪ್ರಿಯ ಹಾಡುಗಳನ್ನು ಹಾಡಿ ಸಂಗೀತಪ್ರಿಯರನ್ನು ಮಂತ್ರಮುಗ್ಧಗೊಳಿಸಿದರು. ‘ಘಟ್ಟದ ಅಂಚಿದಾಯೆ ತೆಂಕಾಯಿ ಬತ್ತು ತೂಯೆ..’, ‘ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ..’, ‘ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು... ಸೇರಿದಂತೆ ವಿವಿಧ ಹಾಡುಗಳು ಮೈದಾನದಲ್ಲಿ ಸಂಗೀತದ ಅಲೆ ಎಬ್ಬಿಸಿದವು.

ಪರಿಚಿತ ಗೀತೆಗಳ ಧ್ವನಿ ಮೊಳಗುತ್ತಿದ್ದಂತೆ ಪ್ರೇಕ್ಷಕರು ಹಾಡಿನೊಂದಿಗೆ ದನಿಗೂಡಿಸಿ ಸಂಭ್ರಮಿಸಿದರು. ಸಂಗೀತದ ಏರಿಳಿತ, ಗಾಯಕರ ಗಾಯನ ಮತ್ತು ತಂಡದ ವಾದ್ಯಗಳ ಸಮ್ಮಿಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಯುವಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಹಾಡುಗಳನ್ನು ಪ್ರಸ್ತುತಪಡಿಸಿದ ತಂಡ, ಯುವ ದಸರಾದ ಮೊದಲ ದಿನವನ್ನು ಸ್ಮರಣೀಯವಾಗಿಸಿತು.

ಗಣ್ಯರ ಉಪಸ್ಥಿತಿ

ಯುವ ದಸರಾ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಡಿ. ರವಿಶಂಕರ್, ಕೆ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರ್‌ನಾಥ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಯುವ ದಸರಾ ಉಪಸಮಿತಿ ಕಾರ್ಯಾಧ್ಯಕ್ಷ ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮೈಸೂರಿನ ನೆನಪು, ದಸರೆಯ ನಂಟು

ಯುವ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಪ್ರಭುದೇವ, ಮೈಸೂರಿನೊಂದಿಗಿನ ತಮ್ಮ ಭಾವನಾತ್ಮಕ ನಂಟನ್ನು ಹಂಚಿಕೊಂಡರು. ಯುವ ದಸರಾ ಎಂಬುದು ಅದ್ಭುತ ಕಲ್ಪನೆ. ನನ್ನನ್ನು ಯುವ ದಸರಾಕ್ಕೆ ಆಹ್ವಾನಿಸಿರುವುದು ತುಂಬಾ ಸಂತಸ ತಂದಿದೆ. ನಾನು ಸಾಮಾನ್ಯವಾಗಿ ಪ್ಯಾಂಟ್, ಶರ್ಟ್ ಧರಿಸುತ್ತೇನೆ. ಆದರೆ, ಯುವ ದಸರಾಗೋಸ್ಕರ ರೇಷ್ಮೆ ಪಂಚೆ, ಶರ್ಟ್ ಧರಿಸಿದ್ದೇನೆ. ದಸರಾ ಅಂದ ತಕ್ಷಣ ನನಗೆ ನೆನಪಾಗುವುದು ಮೈಸೂರು ರಾಜರು, ದೇವರು ಮತ್ತು ಆನೆಗಳು. ನಾನು ಮೈಸೂರಿಗೆ ವರ್ಷಕ್ಕೆ ಹತ್ತು ಬಾರಿಯಾದರೂ ಭೇಟಿ ನೀಡುತ್ತೇನೆ. ಮೈಸೂರಿಗೆ ಬಂದಾಗಲೆಲ್ಲ ನಮ್ಮೂರ ಶಿವನ ದೇವಾಲಯಕ್ಕೆ ತಪ್ಪದೆ ಭೇಟಿ ನೀಡುತ್ತೇನೆ ಎಂದರು.