ಜಿಲ್ಲೆ

ಅನ್ಯಧರ್ಮದ ಯುವತಿಯ ಪ್ರೀತಿಸಿದ್ದವನ ಹತ್ಯೆ

ಮಾಗಡಿ: ಪ್ರೀತಿಯ ವಿಚಾರವಾಗಿ ಯುವತಿಯ ಸಂಬಂಧಿಕರು ಆಕೆಯ ಪ್ರಿಯಕರನನ್ನು ಸಂಬಂಧಿ ಎದುರೇ ಮಂಗಳವಾರ ಹತ್ಯೆ ಮಾಡಿದ್ದಾರೆ.

ನೆಲಮಂಗಲದ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ (24) ಮೃತ. ಈತನ ಪ್ರೇಯಸಿ ಸಂಬಂಧಿ ಗಳಾದ ನಿಜಾಮುದ್ದೀನ್ ಮತ್ತು ಸಿಕಂದರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಲಕ್ಷ್ಮೀಪತಿ ಹಾಗೂ ನೆಲಮಂಗಲ ಬಳಿಯ ಇಸ್ಲಾಂಪುರ ಗ್ರಾಮದ ಯುವತಿ 3 ವರ್ಷಗಳಿಂದ ಗಾರ್ವೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿ ಮನೆಯವರ ವಿರೋಧವಿತ್ತು. ಲಕ್ಷ್ಮೀಪತಿಗೆ ಯುವತಿಯಿಂದ ಕರೆ ಮಾಡಿಸಿದ ಸಂಬಂಧಿಗಳು ಮದುವೆ ವಿಷಯ ಮಾತನಾಡಲು ಸೋಲೂರು ಬಳಿ ಬರುವಂತೆ ತಿಳಿಸಿದ್ದಾರೆ. ನಟರಾಜ್ ಎಂಬುವರ ಜತೆ ಲಕ್ಷ್ಮೀಪತಿ ಹೋಗಿದ್ದಾನೆ.

ಕಂಕೇನಹಳ್ಳಿ ಲಾಯಾ ದರ್ಗಾ ಬಳಿ ಲಕ್ಷ್ಮೀಪತಿಯ ಕೈಕಾಲು ಕಟ್ಟಿ ಆತನ ಸೊಂಟದಲ್ಲಿದ್ದ ಬೆಲ್ಟ್ ತೆಗೆದು ಕುತ್ತಿಗೆಗೆ ಬಿಗಿದು, ಮದ್ಯದ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಈ ವಿಚಾರವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ನಟರಾಜ್​ಗೆ ಬೆದರಿಸಿ ಪರಾರಿಯಾಗಿದ್ದರು.