ಜಿಲ್ಲೆ

ನಂಬುವ ಮುನ್ನ ಪ್ರಶ್ನಿಸುವ ಮನೋಭಾವವಿರಲಿ: ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರನಾಯಕ್ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನಮ್ಮಲ್ಲಿ ಮೌಢ್ಯಗಳನ್ನು ನಂಬುವ ಅನೇಕ ಜನರಿದ್ದಾರೆ. ಆದರೆ ವಿದ್ಯಾರ್ಥಿಗಳು ಯಾವುದನ್ನೂ ನಂಬುವ ಮುನ್ನ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ತಿಳಿಸಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಪಿಇಟಿ, ಎನ್‌ಎಸ್‌ಎಸ್ ಘಟಕ ಮತ್ತು ಕೆ.ವಿ.ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ‘ಯುವಜನತೆ ಮತ್ತು ವೈಜ್ಞಾನಿಕತೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಮ್ಮಲ್ಲಿನ ಎಷ್ಟೋ ವಿಜ್ಞಾನಿಗಳು ಗಣ್ಯರು ಪವಾಡ ಪುರುಷರ ಮಾತಿಗೆ ಮರುಳಾಗಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ಪವಾಡಗಳ ವಿಷಯವನ್ನು ನಂಬುವ ಮೊದಲು ಪ್ರಶ್ನಿಸಿ, ಪುರಾವೆಗಳನ್ನು ಕೇಳಿ. ಇತ್ತ ಸರ್ಕಾರಗಳು ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿವೆ ಎಂದರು.

ಸಮಾರಂಭ ಉದ್ಘಾಟಿಸಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ವಿದ್ಯಾರ್ಥಿಗಳು ಮೂಢನಂಬಿಕೆಗಳ ದಾಸರಾಗದೆ ಎಲ್ಲವನ್ನು ಪರೀಕ್ಷಿಸಿ ಮುಂದಡಿಯಿಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿಇಟಿ ಸಹಕಾರ್ಯದರ್ಶಿ ಕೆ.ಆರ್.ದಯಾನಂದ್, ರಾಜ್ಯ ವಿಜ್ಞಾನ ಪರಿಷತ್ ಮಾಜಿ ಉಪಾಧ್ಯಕ್ಷ ಪ್ರೊ.ಎಚ್.ಆರ್.ಸ್ವಾಮಿ, ಕಾರ್ಯದರ್ಶಿ ಕೃಷ್ಣೇಗೌಡ, ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಕ್ಯಾತೇಗೌಡ,ಪ್ರಾಂಶುಪಾಲ ಸಣ್ಣಮೊಗ, ಎಸ್.ಲೋಕೇಶ್, ಜಿ.ಎನ್.ಶಿವರುದ್ರಪ್ಪ ಇತರರಿದ್ದರು.