ಮೊಳಕಾಲ್ಮೂರು: ನಿಮ್ಮೂರು ಚೆನ್ನಾಗಿರಬೇಕು ಎಂಬ ಅಭಿಮಾನ ನಿಮಗೆ ಇರಬೇಕು. ಆದರೆ, ಪಾದಚಾರಿ ರಸ್ತೆ ಮೇಲೆ ಮಣ್ಣು, ಕಸ ಹಾಕಿ ಅಸ್ವಚ್ಛತೆಗೊಳಿಸಿದ್ದೀರಾ, ಇದರಿಂದ ಅಸ್ವಚ್ಛತೆ ಎಲ್ಲೆಡೆ ಇದೆ. ಇದಕ್ಕೆ ನೀವೇ ಹೊಣೆ. ಇನ್ಮುಂದೆ ಸಹಿಸಲು ಸಾಧ್ಯವಿಲ್ಲ…
ಪಟ್ಟಣದ ಮುಖ್ಯರಸ್ತೆ ಫುಟ್‌ಪಾತ್ ಒತ್ತುವರಿ ತೆರವು, ಸ್ವಚ್ಛತೆ ಕಾರ್ಯ ಶನಿವಾರ ಕೈಗೊಂಡ ವೇಳೆ ಆಕ್ಷೇಪ ವ್ಯಕ್ತಪಡಿಸಿ ವಾಗ್ದಾದ ನಡೆಸಿದ ಅಂಗಡಿ-ಮುಂಗಟ್ಟು ಮಾಲೀಕರನ್ನು ತಹಸೀಲ್ದಾರ್ ಎಂ.ವಿ.ರೂಪಾ ತೀವ್ರ ತರಾಟೆಗೆ ತೆಗೆದು ರೀತಿ ಇದು.
ಬೆಳಗ್ಗೆಯೇ ಜೆಸಿಬಿ ಯಂತ್ರ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಜತೆಗೆ ಪಟ್ಟಣದ ಮುಖ್ಯರಸ್ತೆ ಎರಡು ಬದಿ ಒತ್ತುವರಿ ತೆರವು, ಸ್ವಚ್ಛತೆ ಕೈಗೊಳ್ಳುತ್ತಿದ್ದಂತೆ ಅಂಗಡಿಗಳ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಮಗೆ ಯಾವ ಮುನ್ಸೂಚನೆ ನೀಡದೆ ಪಪಂ ಹಾಗೂ ರಸ್ತೆ ಅಭಿವೃದ್ಧಿ ಪ್ರಾಧಿಕಾರದವರು ರಸ್ತೆ ವಿಸ್ತರಣೆ ಕೈಗೊಂಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದೇವೆ. ಆದರೂ ಪದೇ ಪದೆ ಒತ್ತುವರಿ ತೆರವಿಗೆ ಮುಂದಾಗುವುದು ಸರಿಯಲ್ಲ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಹಸೀಲ್ದಾರ್, ಅಂಗಡಿಗಳ ಮುಂದೆ ಕಸ, ಮಣ್ಣು ತುಂಬಿಕೊಂಡಿದ್ದರೂ ಸುಮ್ಮಿದ್ದೀರಲ್ಲ. ಇದು ಸರಿಯೇ, ಅಲ್ಲದೆ ಸಾರ್ವಜನಿಕರು ಓಡಾಡಲು ಕಿರಿಕಿರಿ ಆಗುತ್ತಿದೆ. ನಿಮ್ಮೂರನ್ನು ಚೆಂದವಾಗಿ ಇಟ್ಟುಕೊಳ್ಳುವಲ್ಲಿ ನಿಮ್ಮಲ್ಲಿ ಉದಾಸೀನ ಇದೆ. ಇನ್ಮುಂದೆ ಇದಕ್ಕೆ ಆಸ್ಪದ ಕೊಡಲ್ಲ. ನಿಮ್ಮ ಆಸ್ತಿಗೆ ದಕ್ಕೆ ತರುವಂತ ಕೆಲಸಕ್ಕೆ ಕೈಹಾಕಲ್ಲ. ಊರಿನ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಕೈಜೋಡಿಸಿ ಎಂದು ತಾಕೀತು ಮಾಡಿದರು.
ನಿಮ್ಮ ಹಕ್ಕನ್ನು ನಾನು ಪ್ರಶ್ನಿಸಲ್ಲ. ಊರಿನ ಅಭಿವೃದ್ಧಿಗೆ ಸಹಕಾರ ಕೊಡಲೇಬೇಕು. ಎಲ್ಲರೂ ಸೇರಿ ಒಂದಿಷ್ಟು ಒಳ್ಳೆಯ ಕೆಲಸ ಮಾಡೋಣ. ಆ.15ರಂದು ಸ್ವಾತಂತ್ರೋತ್ಸವ ಸಂದರ್ಭ ಮಕ್ಕಳು ಬಾವುಟ ಹಿಡಿದು ಜಾಥಾ ನಡೆಸುತ್ತಾರೆ. ಇಂತಹ ಸಂದರ್ಭ ಊರು ಸುಂದರವಾಗಿರಬೇಕು. ಇನ್ನೇರಡು ದಿನದಲ್ಲಿ ನಿಮ್ಮ ಅಂಗಡಿ ಮುಂದೆ ನೀವೆ ಸ್ವಚ್ಛತೆ ಮಾಡಿಕೊಳ್ಳಬೇಕು. ಉಲ್ಲಂಘಿಸಿದರೆ ಕಾನೂನು ಕ್ರಮ ಖಚಿತ ಎಂದು ಎಚ್ಚರಿಸಿದರು.
ಪಿಎಸ್‌ಐ ಪಾಂಡುರಂಗಪ್ಪ ಮಾತನಾಡಿ, ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವುದು ಸರಿಯಲ್ಲ. ನೀವೇ ಸ್ವಯಂ ಆಗಿ ತೆರವು ಮಾಡಲು ಮುಂದಾಗಬೇಕು. ಬೈಕ್-ಕಾರು ಇತರ ವಾಹನಗಳನ್ನು ಜನರು ರಸ್ತೆಯಲ್ಲಿ ನಿಲುಗಡೆ ಮಾಡಿ ನಿಮ್ಮ ಅಂಗಡಿಗೆ ವ್ಯಾಪಾರಕ್ಕೆ ಬರುತ್ತಾರೆ. ಇದರಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದರು.
ನಿಮ್ಮ ಅಂಗಡಿಗಳ ಮುಂದೆಯೇ ಬೈಕ್ ನಿಲುಗಡೆಗೆ ಜಾಗ ಬಿಡಬೇಕು. ಇಲ್ಲದಿದ್ದರೆ ವಾಹನ ಮಾಲೀಕರು ಹಾಗೂ ನಿಮಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಆ.15ರ ವರೆಗೆ ಕಾಲಾವಕಾಶ ಕೊಡುತ್ತೇವೆ. ಆನಂತರ ರಸ್ತೆಯಲ್ಲಿ ಒಂದು ಬೈಕ್ ನಿಂತರೂ ನಿಮ್ಮ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದರು.
ಜನರಿಗೆ ಏನಾದ್ರೂ ಸಮಸ್ಯೆ ಆಗಲಿ ನಮಗೆ ಮಾತ್ರ ವ್ಯಾಪಾರ ಆದ್ರೆ ಸಾಕು ಎಂಬ ಮನೋಭಾ ಸರಿಯಲ್ಲ. ರಸ್ತೆ ಸುರಕ್ಷತೆ, ಸ್ವಚ್ಛತೆ ಕುರಿತು ನಿಮ್ಮಲ್ಲಿ ಅರಿವು ಇರಬೇಕು. ಇಲ್ಲದಿದ್ದರೆ ದಂಡದ ಜತೆಗೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾರ್ವಜನಿಕರ ಆಕ್ರೋಶ: ಒತ್ತುವರಿ ತೆರವು, ಸ್ವಚ್ಛತೆ ಕಾರ್ಯಕ್ಕೆ ಅಡ್ಡಿಪಡಿಸಲು ಮುಂದಾಗ ವ್ಯಾಪಾರಸ್ಥರನ್ನು ನಾಗರಿಕರು ತರಾಟೆಗೆ ತೆಗೆದುಕೊಂಡರು. ಫುಟ್‌ಪಾತ್ ಜಾಗವನ್ನೇ ಒತ್ತುವರಿ ಮಾಡಿಕೊಂಡು ವ್ಯವಹಾರ ನಡೆಸಲಾಗುತ್ತಿದೆ. ಪಾದಚಾರಿಗಳಿಗೆ ಓಡಾಡಲು ಜಾಗವೇ ಇಲ್ಲದಂತೆ ಆಗಿದೆ. ವಾಹನ ನಿಲುಗಡೆಗೂ ಸಮಸ್ಯೆ ಆಗಿದೆ. ಕೂಡಲೇ ಒತ್ತುವರಿ ಜಾಗವನ್ನು ತೆರವುಗೊಳಿಸಿ, ಜನರಿಗೆ ಅನಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.