ಯುವಕರು ನಿರ್ಮಿಸಿದ ನೂತನ ಮನೆ. 
ಜಿಲ್ಲೆ

ಬೆಂಕಿ ಬಿದ್ದ ಮನೆಯ ಯಜಮಾನಿಗೆ ‘ಯುವಕರು’ ಆಸರೆ: ಮುತುವರ್ಜಿ ವಹಿಸಿದ ಶಾಸಕರು

Avinash R

ಸಮೀಕ್ಷಾ ಎಸ್.ಪಿ.ವೇಣೂರು

ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಮನೆಯೊಡತಿ ಕಷ್ಟದಿಂದ ತಮ್ಮ ಜತೆಗಿದ್ದ ನಾಲ್ವರನ್ನು ಸಾಕುತ್ತಿದ್ದಾಗಲೇ ಉಂಟಾದ ಬೆಂಕಿ ಆಕಸ್ಮಿಕದಿಂದ ಇದ್ದ ಸಣ್ಣ ಮನೆಯೂ ಉರಿದು ಭಸ್ಮವಾಗಿತ್ತು. ಇರುವ ಸಣ್ಣ ಜಾಗದಲ್ಲೇ ಮನೆಯೊಳಗಿಟ್ಟಿದ್ದ ದೈನಂದಿನ ಬಳಕೆಯ ವಸ್ತುಗಳಲ್ಲದೆ, ಬಟ್ಟೆ, ದಿನಸಿ ಸಾಮಗ್ರಿಗಳೂ ಸುಟ್ಟು ಕರಕಲಾಗಿತ್ತು. ಕೆಲಸಕ್ಕೆಂದು ಹೋಗಿ ಅರ್ಧದಲ್ಲೇ ವಾಪಸ್ ಮನೆಗೆ ಬಂದು ನೋಡುವಾಗ ಆ ಮನೆಯೊಡತಿಗೆ ಕಂಡದ್ದು ಸುಟ್ಟು ಭಸ್ಮವಾಗುತ್ತಿರುವ ಮನೆ. ಮುಂದೇನು ಎಂಬ ಚಿಂತೆ ಆವರಿಸಿದಾಗ ಆ ಮನೆಯೊಡತಿಯ ನೆರವಿಗೆ ಬಂದವರು ಸ್ಥಳೀಯ ಪರಿಸರದ ಯುವಕರು ಮತ್ತು ಶಾಸಕರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಪಳನೀರು ಎಂಬಲ್ಲಿ ಕಳೆದ ಜನವರಿ 23ರಂದು ಬೆಂಕಿಯಿಂದ ಸುಟ್ಟ ಪೂರ್ಣ ಪ್ರಮಾಣದಲ್ಲಿ ಬೆಂಕಿಗಾಹುತಿಯಾದ ಮನೆಯ ಜಾಗದಲ್ಲಿ ಈಗ ಸುಂದರ ಮನೆ ತಲೆಯೆತ್ತಿದೆ. ಕಾವೂರು ಪಳನೀರಿನ ಮೈರೋಡಿಗುಡ್ಡೆ ನಿವಾಸಿ ಇಂದಿರಾ ಎಂಬುವವರ ಜತೆ ನಿಂತ ಸ್ಥಳೀಯ ಯುವಕರು ಹಾಗೂ ಸಂಘ ಸಂಸ್ಥೆಗಳು ಎಂಟೇ ತಿಂಗಳಲ್ಲಿ ಸುಂದರ ಮನೆ ನಿರ್ಮಿಸಿಕೊಟ್ಟಿದೆ. ಅಂದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಇಂದಿರಾ ಅವರಿಗೆ ನೂತನ ಮನೆ ಕಟ್ಟಿಸುವ ಭರವಸೆ ನೀಡಿದ್ದರು. ಆ ಭರವಸೆ ಹುಸಿ ಮಾಡದೆ ಯುವಕರ ಜತೆ ನಿಂತು ಇಂದು ಕಾರ್ಯಗತಗೊಳಿಸಿದ್ದಾರೆ.

ಶಾಸಕರ ವಿಶೇಷ ಮುತುವರ್ಜಿ ಹಾಗೂ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾವೂರು ಪ್ರಖಂಡ, ಶ್ರೀ ರಕ್ತೇಶ್ವರಿ ಸನ್ನಿಧಾನ ಸೇವಾ ಟ್ರಸ್ಟ್, ಗಣೇಶ್ ಮಿತ್ರವೃಂದ ಪಳನೀರು ಕಾವೂರು, ಪಳನೀರು ಫ್ರೆಂಡ್ಸ್ ಸರ್ಕಲ್ ಮತ್ತು ಊರ ಪರವೂರ ದಾನಿಗಳ ಸಹಕಾರದಿಂದ ಒಂಬತ್ತು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಿದೆ. 650 ಚದರಡಿಯ ಎರಡು ಬೆಡ್‌ರೂಮ್‌ನ ಮನೆ ಸುಣ್ಣ ಬಣ್ಣ ಬಳಿದುಕೊಂಡು ಎದ್ದು ನಿಂತಿದೆ. ಹಲವು ದಾನಿಗಳು ಯುವಕರ ಕಾರ್ಯವನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಬಡ ಕುಟುಂಬದಲ್ಲಿ ವಾಸವಿದ್ದ ಇಂದಿರಾ ಅವರ ಮನೆಯಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಯುವಕ ಸೇರಿ ನಾಲ್ವರು ವಾಸವಿದ್ದು, ಕೂಲಿ ಕೆಲಸ ಮಾಡುತ್ತಿದ್ದರು.

20ರಂದು ಹಸ್ತಾಂತರ

ಬಡ ಕುಟುಂಬಕ್ಕೆ ಮನೆ ಕಟ್ಟಿಕೊಟ್ಟ ಯುವಕ ಶ್ರಮ ಪೂರ್ಣಗೊಂಡಿದ್ದು ಆಗಸ್ಟ್ 20ರಂದು ಮನೆಯನ್ನು ಒಡತಿಗೆ ಹಸ್ತಾಂತರಿಸಲಾಗುವುದು. ಬೆಳಗ್ಗೆ 11.30ಕ್ಕೆ ಮೈರೋಡಿಗುಡ್ಡೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮನೆಯ ಕೀಲಿಕೈ ಹಸ್ತಾಂತರಿಸುವರು. ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್‌ನ ಅರ್ಜುನ್ ಭಂಡಾರ್ಕರ್ ಪಾಲ್ಗೊಳ್ಳುವರು.

ಮನೆ ಬೆಂಕಿಗಾಹುತಿಯಾದಾಗ ತುಂಬ ಸಂಕಷ್ಟಕ್ಕೆ ಒಳಗಾಗಿದ್ದೆವು. ಶಾಸಕರು ಪರಿಶೀಲನೆ ಮಾಡಿ ಹೊಸ ಮನೆ ನಿರ್ಮಾಣದ ಭರವಸೆ ನೀಡಿದ್ದರು. ಅದರಂತೆ ಸ್ಥಳೀಯ ಯುವರಕು, ಸಂಘ ಸಂಸ್ಥೆಗಳ ನೆರವಿನಿಂದ ಮನೆ ನಿರ್ಮಾಣ ಪೂರ್ಣಗೊಂಡಿದ್ದು ಸಂತಸ ತಂದಿದೆ.-ಇಂದಿರಾ ಮೈರೋಡಿಗುಡ್ಡೆ ನಿವಾಸಿ https://www.vijayavani.net/mental-stress-and-drugs-awarness-camp-home-guards-at-zilla-panchayath https://www.vijayavani.net/bolli-maletha-shiva-shakthilu-drama-on-27-at-townhall