ಜಿಲ್ಲೆ

ಸಹೋದ್ಯೋಗಿಯ ಜತೆ ಪರಾರಿಯಾದ ಅಕ್ಕ ಫೋನಿನಲ್ಲಿ ಹೇಳಿದ್ದನ್ನು ಕೇಳಿ ಮೃತಪಟ್ಟ ತಂಗಿ!

ಉಡುಪಿ: ಸಹೋದ್ಯೋಗಿಯ ಜತೆ ಅಕ್ಕ ಪರಾರಿಯಾದ ಸುದ್ದಿ ಕೇಳಿ ಅಸ್ವಸ್ಥಗೊಂಡ ತಂಗಿ ಸಾವಿಗೀಡಾಗಿರುವ ಘಟನೆ ಕಾರ್ಕಳದ ಮಾಳ ಗ್ರಾಮದ ಮಂಜಲ್ತಾರ್ ಎಂಬಲ್ಲಿ ಗುರುವಾರ ನಡೆದಿದೆ.

ಆಹಾರ ಉತ್ಪಾದನಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾಳ ನಿವಾಸಿ ಸುರಕ್ಷಿತ ಎಂಬಾಕೆ ಎರಡು ದಿನಗಳಿಂದ ಕಾಣೆಯಾಗಿದ್ದಳು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪಾಲಕರು ದೂರು ದಾಖಲಿಸಿದ್ದರು. ಇಂದು ತಂಗಿಯ ಮೊಬೈಲ್​ಗೆ ಕರೆ ಮಾಡಿದ್ದ ಸುರಕ್ಷಿತ, ನನಗೆ ಮನೆಯಲ್ಲಿ ಗೊತ್ತು ಮಾಡಿದ ಯುವಕನ ಜತೆ ಮದುವೆಯಾಗಲು ಇಷ್ಟವಿಲ್ಲ. ನಾನು ಪ್ರೀತಿಸಿದ ಯುವಕನ ಜತೆ ಹೋಗಿರುತ್ತೇನೆ. ಕಂಪನಿಯ ಸಹೋದ್ಯೋಗಿ ಭುವನ್ ಜತೆಗೆ ಇದ್ದೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದಿದ್ದಾಳೆ.

ಇತ್ತ ಅಕ್ಕನ ಮಾತು ಕೇಳಿ ಆಘಾತಕ್ಕೆ ಒಳಗಾದ ತಂಗಿ ಶ್ವೇತಾ ಮೃತಪಟ್ಟಿದ್ದಾಳೆ. ಮೊದಲೇ ಮೂರ್ಛೆ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ಶ್ವೇತಾಳಿಗೆ ಅಕ್ಕನ ಹೇಳಿಕೆ ತೀವ್ರ ಆಘಾತವನ್ನುಂಟು ಮಾಡಿದೆ. ಅಸ್ವಸ್ಥಗೊಂಡಿದ್ದ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾಳೆ.

ಅಂದಹಾಗೆ ಸುರಕ್ಷಿತಳಿಗೆ ಲಾಕ್​ಡೌನ್​ ಸಂದರ್ಭದಲ್ಲಿ ಮದುವೆ ನಿಶ್ಚಿತಾರ್ಥವಾಗಿತ್ತು. ಆದರೆ, ಸುರಕ್ಷಿತ ತನ್ನ ಸಹೋದ್ಯೋಗಿ ಅಸ್ಸಾಂ ಮೂಲದ ಭುವನ್​ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇದೀಗ ಇಬ್ಬರು ಪರಾರಿಯಾಗಿದ್ದರೆ, ತಂಗಿ ಶ್ವೇತಾ ಅಕ್ಕನ ಸುದ್ದಿ ಕೇಳಿ ಮೃತಪಟ್ಟಿದ್ದಾಳೆ. ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)