ಆನೇಕಲ್: ಬೆಂಗಳೂರು&ಚೆನ್ನೆ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಳೆಯ ಚಂದಾಪುರದ ಬಳಿಯ ರೈಲ್ವೆ ಬ್ರಿಡ್ಜ್ ಸಮೀಪ ನೀಲಿ ಬಣ್ಣದ ಸೂಟ್ ಕೇಸ್ನಲ್ಲಿ ಸುಮಾರು 18 ವರ್ಷದ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ಯುವತಿ ಗುಲಾಬಿ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕೊಲೆ ಮಾಡಿದ ಬಳಿಕ ಕೈ ಕಾಲುಗಳನ್ನು ಮಡಚಿ ಇಡೀ ದೇಹವನ್ನು ಸೂಟ್ ಕೇಸ್ನಲ್ಲಿ ತುಂಬಲಾಗಿದೆ. ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆಗಿರುವ ಕುರುಹು ಇದ್ದು, ಉಳಿದಂತೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಬೇರೆಲ್ಲೋ ಕೊಲೆಗೈದು ರೈಲಿನಲ್ಲಿ ಸಾಗುವ ವೇಳೆ ಹೊರಗೆ ಎಸೆದಿರುವ ಸಾಧ್ಯತೆ ಇದೆ. ಮಾಹಿತಿ ತಿಳಿಯುತ್ತಿದ್ದಂತೆ ಸೂರ್ಯನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ರೈಲ್ವೆ ಹಳಿ ಸಮೀಪ ಶವ ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಕೇಸ್ ದಾಖಲಿಸಲಿದ್ದಾರೆ ಎಂದು ಕಾದು ಕುಳಿತ್ತಿದ್ದರು. ಆದರೆ ರೈಲ್ವೆ ಪೊಲೀಸರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಬಳಿಕ ಸೂರ್ಯನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸೂಟ್ ಕೇಸ್ನಲ್ಲಿ ಪತ್ತೆಯಾದ ಯುವತಿ ಚಹರೆ ಗಮನಿಸಿದರೆ ಉತ್ತರ ಭಾರತ ಮೂಲದ ಯುವತಿಯಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.