ಜಿಲ್ಲೆ

ಯುವತಿ ಅಪಹರಿಸಿ ಮದುವೆ; ಲವ್​ ಜಿಹಾದ್​ ಆರೋಪ

ಉಡುಪಿ: ಕೆಸ್ತ ಧರ್ಮಕ್ಕೆ ಸೇರಿದ ಇಂಜಿನಿಯರಿಂಗ್​ ವಿದ್ಯಾರ್ಥಿನಿಯನ್ನು ಮುಸ್ಲಿಂ ಯುವಕ ಅಪಹರಿಸಿ ಮದುವೆಯಾಗಿದ್ದಾನೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಪೋಲಿಸರು ಯಾವುದೇ ಕ್ರಮಕೈಗೊಂಡಿಲ್ಲ. ಆರೋಪಿಯನ್ನು ಪತ್ತೆಹಚ್ಚಿ ಮಗಳನ್ನು ನಮ್ಮ ಮುಂದೆ ಹಾಜರುಪಡಿಸುವಲ್ಲಿ ವಿಲರಾಗಿದ್ದಾರೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ ತಾಯಿ ಮೇರುಸ್​ ಪುಷ್ಪಲತಾ, ಕರಂಬಳ್ಳಿ ನಿವಾಸಿ ಅಕ್ರಮ್​ ಎಂಬಾತ ಮಗಳನ್ನು ಇನ್ಸ್​ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಆಕೆಯ ಸ್ನೇಹ ಸಂಪಾದಿಸಿ, ಬ್ಲಾಕ್ಮೇಲ್​ ಮಾಡಿ ಮಾ. 20ರಂದು ಕಾಲೇಜಿನಿಂದ ವಾಪಸು ಮನೆಗೆ ತೆರಳುವಾಗ ಅಪಹರಿಸಿದ್ದಾನೆ. 4 ವರ್ಷದ ಹಿಂದೆ ಅಕ್ರಮ್​ ಮೊಹಮ್ಮದ್​ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ನೀಡಲಾಗಿತ್ತು. ಈ ಸೇಡು ತೀರಿಸಿಕೊಳ್ಳಲು ಅಕ್ರಮ್​ ಮೊಹಮ್ಮದ್​ ನನ್ನ ಮಗಳನ್ನು ಅಪಹರಿಸಿ, ಆಶ್ಲೀಲ ಚಿತ್ರಗಳನ್ನು ವೈರಲ್​ ಮಾಡುವುದಾಗಿ ಬೆದರಿಸಿ ವಿವಾಹ ನೊಂದಣಿಗೆ ಸಹಿ ಹಾಕಿಸಿದ್ದಾನೆ ಎಂದು ದೂರಿದ್ದಾರೆ.

ಹೈಕೋರ್ಟ್​ನಲ್ಲಿ ಹೆಬಿಯಸ್​ ಕಾರ್ಪಸ್​

ಉಡುಪಿ ಉಪನೋಂದಣಿ ಕಚೇರಿಯಲ್ಲಿ ಅಕ್ರಮ್​ ವಿವಾಹ ನೋಂದಣಿ ಅರ್ಜಿ ಸಲ್ಲಿಸಿದ ವಿಚಾರ ನಮ್ಮ ಗಮನಕ್ಕೆ ಬಂದಾಗ ದಿಕ್ಕು ತೋಚದಂತಾಗಿದೆ. ಈ ಬಗ್ಗೆ ಜಿಲ್ಲಾ ಎಸ್ಪಿಯವರನ್ನು ಭೇಟಿ ಮಾಡಿದ್ದು, ನಮ್ಮನ್ನು ಕೂರಿಸಿ ಚೆನ್ನಾಗಿ ಮಾತನಾಡಿದ್ದಾರೆ. ಆದರೆ ಕಾನೂನಿನಂತೆ ಏನು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ ಮಗಳನ್ನು ನಮ್ಮ ಮುಂದೆ ಹಾಜರು ಪಡಿಸುವಂತೆ ಹೈಕೋರ್ಟ್​ನಲ್ಲಿ ಹೆಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದೇವೆ ಎಂದರು. ಯುವತಿ ತಂದೆ ಗಾಡ್ವಿನ್​ ದೇವದಾಸ್​ ಉಪಸ್ಥಿತರಿದ್ದರು.

ಎ.4ಕ್ಕೆ ಯುವತಿಯನ್ನು ಹಾಜರುಪಡಿಸಲು ಸೂಚನೆ

ಮಾ.28 ರಂದು ಯುವತಿಯ ತಂದೆ ತನ್ನ ಮಗಳನ್ನು ಹುಡುಕಿಕೊಡುವಂತೆ ಹೈಕೋರ್ಟ್​ನಲ್ಲಿ ಹೇಬಿಯಸ್​ ಕಾರ್ಪಸ್​ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ಕಾಮೇಶ್ವರ್​ ರಾವ್​ ಹಾಗೂ ನ್ಯಾ.ನದಾಫ್​ ಅವರಿದ್ದ ವಿಭಾಗೀಯ ಪೀಠವು ಎ.4 ರಂದು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.