ಮಾಗಡಿ
ಮಾಗಡಿಯ ತಾಲೂಕಿನ ಪ್ರೇಮಿಗಳಿಬ್ಬರು ಚಿಕ್ಕಮಗಳೂರಿನಲ್ಲಿ ಬುಧವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಪಟ್ಟಣದ ಬೈಚಾಪುರದ ಪೂರ್ಣಿಮಾ (26) ಮತ್ತು ವಿದ್ಯಾನಗರ ನಿವಾಸಿ ಕ್ಯಾಬ್ ಚಾಲಕ ಮಧು (28) ಮೃತರು.
ಮಾಗಡಿ ತಾಲೂಕು ಗುದ್ದಲಹಳ್ಳಿ ಗ್ರಾಮದ ಪೂರ್ಣಿಮಾ, ತಾಲೂಕಿನ ಗಟ್ಟೀಪುರ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದರೆ, ಕ್ಯಾಬ್ ಚಾಲಕ ಮಧು ಮೂಲತಃ ಕಡೂರಿನವನಾಗಿದ್ದು, ಮಾಗಡಿ ಪಟ್ಟಣದ ವಿದ್ಯಾನಗರದಲ್ಲಿ ವಾಸವಾಗಿದ್ದ. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಪೂರ್ಣಿಮಾಳನ್ನು ಮಧು ಕಾರಿನಲ್ಲಿ ಪ್ರವಾಸಕ್ಕೆಂದು ಕರೆದೊಯ್ದಿದ್ದ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಗ್ರಾಮದ ಕಾಫಿ ತೋಟದ ರಸ್ತೆಯ ಬಳಿ ಕಾರಿನಲ್ಲೇ ಕುತ್ತಿಗೆ ಸೀಳಿದ ರೀತಿಯಲ್ಲಿ ಪೂರ್ಣಿಮಾ ಮೃತದೇಹ ಪತ್ತೆಯಾಗಿದ್ದು, ಜತೆಯಲ್ಲಿದ್ದ ಮಧುನೇ ಕೊಂದಿರುವ ಅನುಮಾನವಿದೆ. ಜತೆಗೆ ಆತನೂ ಸಮೀಪದ ಕಾಫಿ ತೋಟದ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.
ಪೂರ್ಣಿಮಾಳ ಮದುವೆ ಬೇರೊಬ್ಬ ಯುವಕನ ತೆ ನಿಶ್ಚಯವಾಗಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.
ಮದುವೆಯಾಗುವಂತೆ ಒತ್ತಾಯಿಸಿ ಪೂರ್ಣಿಮಾಳನ್ನು ಮಧುನೇ ಕೊಂದು ನಂತರ ವಿಷಯ ಬಯಲಾಗುತ್ತದೆಂಬ ಭಯದಲ್ಲಿ ಮಧು ನೇಣಿಗೆ ಶರಣಾಗಿರಬಹುದೆಂದು ಪೂರ್ಣಿಮಾಳ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪೂರ್ಣಿಮಾ ಮತ್ತು ಮಧುವಿನ ಮರಣೊತ್ತರ ಪರೀಕ್ಷೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಪೂರ್ಣಿಮಾಳ ಶವಸಂಸ್ಕಾರವನ್ನು ಮಾಗಡಿ ತಾಲೂಕಿನ ಗುದ್ದಲಹಳ್ಳಿಯಲ್ಲಿ ನೆರವೇರಿಸಲಾಗುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ.