ಯಲಬುರ್ಗಾ: ಯುವಕರು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ, ನಮ್ಮಲ್ಲಿರುವ ಯುವಕರು ಶಿಕ್ಷಣ ಪ್ರೇಮದಿಂದ ಮಾದರಿಯಾಗಿದ್ದಾರೆ ಎಂದು ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ ಹೇಳಿದರು.
ಸಮೀಪದ ಹೊಸಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಶಾಲಾ ಆವರಣದಲ್ಲಿ ಹೊಸಳ್ಳಿ ಪ್ರೀಮಿಯರ್ ಲೀಗ್‌ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರಿಕೆಟ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಎಂ.ಡಿ ರಾಯಲ್ಸ್ ತಂಡದವರು ನಗದು ಪುರಸ್ಕಾರವನ್ನು ವಸತಿ ಶಾಲೆಯ 2025ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು 7,001ರೂ. ದೇಣಿಗೆ ನೀಡಿದ್ದು ಶ್ಲಾಘನೀಯ. ಯುವಕರ ಕಾರ್ಯ ಉತ್ತಮ ಸಂದೇಶವಾಗಿದೆ ಎಂದರು.
ಶಿಕ್ಷಕರಾದ ದ್ಯಾಮಪ್ಪ ರಾಜೂರ್, ಪುರುಷೋತ್ತಮ ಪೂಜಾರ್, ವಿಜಯಕುಮಾರ್ ದೊಡ್ಡಮನಿ, ರವೀಂದ್ರ ಮಾಳೆಕೊಪ್ಪ, ಮಂಜುಳಾ ನರೇಂದ್ರ, ಕಳಕೇಶ ಆರಕೇರಿ, ರೇಣುಕಾ ಪಾಟೀಲ್, ಡಿ.ಹನುಮಂತ, ಎಸ್.ಬಸವರಾಜ, ಎಂ.ಡಿ ರಾಯಲ್ಸ್ ತಂಡದ ಸದಸ್ಯರು ಇದ್ದರು.