ಜಿಲ್ಲೆ

ಯುವ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಿ; ಡಾ.ವೆಂಕಟೇಶ್

ಮಡಿಕೇರಿ: ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜನರ ಪ್ರಾಣವನ್ನು ಉಳಿಸುವಂತಾಗಲಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ, ಮಡಿಕೇರಿ ರೋಟರಿ, ಮಡಿಕೇರಿ ಮಾಜಿ ಸೈನಿಕರ ಸಂಘ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.


ಯುವಜನತೆ ರಕ್ತದಾನ ಮಾಡಲು ಮುಂದೆ ಬರಬೇಕು ಇದರಿಂದ ಹಲವಾರು ಜನರ ಜೀವ ಉಳಿಸಿದಂತಾಗುತ್ತದೆ. ಜಿಲ್ಲೆಯ ೧೮ ವರ್ಷ ತುಂಬಿದ ಎಲ್ಲಾ ಯುವಜನರು ರಕ್ತದಾನ ಮಾಡಲು ಅರ್ಹರು, ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನ ಮಾಡುವುದರಿಂದ ತುರ್ತು ಸಮಯದಲ್ಲಿ ಬೇಕಾದ ರಕ್ತವನ್ನು ಪಡೆಯಲು ಸಾಧ್ಯ. ಅಪಘಾತ ನಡೆದ ಸಂದರ್ಭ ಮತ್ತು ಗರ್ಭಿಣಿಯರಿಗೆ ಹೆರಿಗೆಯಾದ ಸಮಯದಲ್ಲಿ ಹೆಚ್ಚು ರಕ್ತದ ಅವಶ್ಯಕತೆ ಇರುವುದರಿಂದ ಹೆಚ್ಚಾಗಿ ರಕ್ತದಾನ ಮಾಡಬೇಕು. ಹೆಚ್ಚು ರಕ್ತದಾನವನ್ನು ಮಾಡಿದಷ್ಟು ಇನ್ನೊಬ್ಬರ ಜೀವವನ್ನು ಉಳಿಸಬಹುದು. ಆದ್ದರಿಂದ ಎಲ್ಲರೂ ರಕ್ತದಾನ ಮಾಡಲು ಮುಂದಾಗಿ ಎಂದು ತಿಳಿಸಿದರು.


ರೆಡ್‌ಕ್ರಾಸ್ ಸಂಸ್ಥೆಯ ರವೀಂದ್ರ ರೈ ಮಾತನಾಡಿ, ಸೆ೨ ರಿಂದ ಪ್ರಾರಂಭವಾಗಿ ಅ೨ ವರೆಗೆ ರಕ್ತದಾನ ಶಿಬಿರ ಕಾರ್ಯಕ್ರಮ ನಡೆದಿದೆ. ಇದರಿಂದ ಪ್ರಾಣವನ್ನು ಉಳಿಸುವಂತ ಕೆಲಸ ಆಗುತ್ತಿದೆ ಎಂದರು.


ವಿಜ್ಞಾನದಿಂದ ಮನುಷ್ಯನನ್ನು ಬದುಕಿಸಲು ಸಾಧ್ಯವಿಲ್ಲ ಒಬ್ಬ ಮನುಷ್ಯ ಇನ್ನೊಬ್ಬನಿಗೆ ರಕ್ತ ನೀಡಿದಾಗ ಮಾತ್ರ ಜೀವವನ್ನು ಉಳಿಸಲು ಸಾಧ್ಯ. ಚಿಕ್ಕ ವಯಸ್ಸಿನಲ್ಲೇ ವಿಧ್ಯಾರ್ಥಿಗಳಿಗೆ ರಕ್ತದಾನದ ಬಗ್ಗೆ ಮಾಹಿತಿ ನೀಡಿ ಮುಂದೆ ಅವರು ರಕ್ತದಾನ ಮಾಡುವಂತಾಗಲಿ. ಹೀಗೆ ಮಾಡಿದಾಗ ರಕ್ತದಾನದ ಬಗ್ಗೆ ಅರಿವು ಮಕ್ಕಳಲ್ಲಿ ಮೂಡಿಸಿದಂತಾಗುತ್ತದೆ ಎಂದರು.


ಜಿಲ್ಲಾಸ್ಪತ್ರೆಯ ವೈಧ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ರಕ್ತದಾನದ ಅರಿವನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ಇದರ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರಕ್ತನಿಧಿ ಕೇಂದ್ರಗಳು ಸ್ವಯಂ ರಕ್ತದಾನಿಗಳನ್ನು ಅವಲಂಬನೆ ಮಾಡುತ್ತಿವೆ. ಯುವಕರು ಯಾವುದೇ ಪ್ರತಿಫಲವನ್ನು ಬಯಸದೆ ರಕ್ತದಾನವನ್ನು ಮಾಡಲು ಮುಂದೆ ಬರಬೇಕು. ಒಬ್ಬರ ರಕ್ತದಿಂದ ಎರಡರಿಂದ ಮೂರು ಜನರನ್ನು ಉಳಿಸಲು ಸಾಧ್ಯ. ಜನರಲ್ಲಿ ಕೆಂಪು ರಕ್ತ ಕಣ ಮತ್ತು ಬಿಳಿ ರಕ್ತ ಕಣ ಕಮ್ಮಿ ಇದ್ದವರಿಗೆ ಅವರಿಗೆ ಬೇಕಾದ ರಕ್ತವನ್ನು ನೀಡಲಾಗುತ್ತದೆ. ಆದ್ದರಿಂದ ೧೮ ವರ್ಷ ಮೇಲ್ಪಟ್ಟವರು ರಕ್ತದಾನವನ್ನು ಮಾಡಲು ಮುಂದೆ ಬರಬೇಕು. ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಯಾವುದೇ ಭಯವಿಲ್ಲದೆ ಸಂಪೂರ್ಣ ಆರೋಗ್ಯವಂತರಾದವರು ರಕ್ತದಾನ ಮಾಡಲು ಸಾಧ್ಯ ಎಂದರು.


ರಕ್ತದಾನ ಶಿಬಿರದಲ್ಲಿ ಅತಿಹೆಚ್ಚು ಬಾರಿ ರಕ್ತದಾನ ಮಾಡಿದ ವಿರಾಜಪೇಟೆಯ ರವಿಶಂಕರ್, ಕುಶಾಲನಗರದ ಸತೀಶ್ ಕುಮಾರ್, ಸೋಮವಾರಪೇಟೆಯ ದೀಪಕ್ ಮತ್ತು ಪವಿತ್ರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಯಾದ ಡಾ.ಗೋಪಿನಾಥ್, ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಗೋಪಾಲ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ರಾದ ನಂಜುಂಡಯ್ಯ, ಮಡಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಕುಟ್ಟಪ್ಪ, ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ, ರೋಟರಿ ಸಂಸ್ಥೆಯ ರತನ್ ತಮ್ಮಯ್ಯ, ರೋಟರಿ ಕ್ಲಬ್‌ನ ರವಿ ಅಪ್ಪಾಜಿ, ರೆಡ್ ಕ್ರಾಸ್ ಸಂಸ್ಥೆಯ ಮುರಳಿಧರ್ ಇತರರು ಉಪಸ್ಥಿತರಿದ್ದರು.