ರಟ್ಟಿಹಳ್ಳಿ: ಪ್ರಸ್ತುತ ಯುವ ಜನ ಮಾದಕ ವ್ಯಸನದ ಬಳಕೆಯಿಂದಾಗಿ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ. ಮಾದಕ ವ್ಯಸನದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುವ ಮೂಲಕ ಕುಟುಂಬಕ್ಕೆ ಅಪಾರ ನೋವುಂಟು ಮಾಡುತ್ತಿದ್ದಾರೆ. ಯುವ ಜನ ಮಾದಕ ವ್ಯಸನದಿಂದ ದೂರವಿರಬೇಕು ಮತ್ತು ಸುಭದ್ರ ಸಮಾಜದ ನಿರ್ವಣಕ್ಕೆ ಸಹಕರಿಸಬೇಕು ಎಂದು ಪಿಎಸ್ಐ ರಮೇಶ ಪಿ.ಎಸ್. ಹೇಳಿದರು.
ಪಟ್ಟಣದಲ್ಲಿ ಪೊಲೀಸ್ ಠಾಣೆ, ಸರ್ಕಾರಿ ಪದವಿಪೂರ್ವ ಕಾಲೇಜ್ ಮತ್ತು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಕಾಲೇಜ್ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕಾಗಿ ದುಶ್ಚಟಗಳಿಂದ ದೂರವಿರಬೇಕು. ಪ್ರತಿದಿನ ವ್ಯಾಯಾಮ ಹಾಗೂ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಪಟ್ಟಣದ ಭಗತ್ಸಿಂಗ್ ವೃತ್ತ, ಶಿವಾಜಿ ನಗರ, ಹಳೇ ಬಸ್ ನಿಲ್ದಾಣ ಮೂಲಕ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಬಳಿಕ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಎ.ಎಸ್.ಐ ಅಶೋಕ ಕೊಂಡ್ಲಿ, ರವಿ ಹಳಲಗೇರಿ, ಪ್ರಾಚಾರ್ಯರು ರಾಘವೇಂದ್ರ ಎ.ಜಿ., ಜಿ.ಜಿ. ಕಮ್ಮಾರ, ಉಪನ್ಯಾಸಕರು ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.