ಜಿಲ್ಲೆ

ಖಾದಿ ವಸ್ತ್ರಗಳತ್ತ ಯುವ ಜನತೆಗಿರಲಿ ಒಲವು - ಮಂಡಳಿಯ ಅಧ್ಯಕ್ಷ ಬಸನ ಗೌಡ ತುರುವಿಹಾಳ ಹೇಳಿಕೆ

ಮಂಗಳೂರು: ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಆರಂಭವಾದ ಖಾದಿ ಬಟ್ಟೆಯತ್ತ ಯುವ ಜನತೆ ಹೆಚ್ಚಿನ ಒಲವು ತೋರಿಸುವ ಅಗತ್ಯವಿದೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಬಸನ ಗೌಡ ತುರುವಿಹಾಳ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಅ.24ರ ತನಕ ನಗರದ ಲಾಲ್‌ಭಾಗ್‌ನ ದಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಖಾದಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ರಾಜ್ಯದ 23 ಜಿಲ್ಲೆಗಳಲ್ಲಿ ಸುಮಾರು 40 ಸಾವಿರ ಮಂದಿ ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯಕ್ಕೆ ಪೂರಕವಾಗಿರುವ ಖಾದಿ ಬಟ್ಟೆಯನ್ನು ಹೆಚ್ಚು ಬಳಸುವ ಮೂಲಕ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಜೀವನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಈಗಾಗಲೇ 9 ಖಾದಿ ಉತ್ಸವ ಕಾರ್ಯಕ್ರಮಗಳು ನಡೆದಿದ್ದು, ಸುಮಾರು 10 ಕೋಟಿ ರೂ. ವ್ಯವಹಾರ ನಡೆಸಲಾಗಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಖಾದಿ ಉತ್ಸವ ಉದ್ಘಾಟಿಸಿದರು. ಖಾದಿ ಬಟ್ಟೆಯಲ್ಲಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಗ್ರಾಹಕರಿಗೆ ಪೂರಕವಾಗಿ ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಮಾರುಕಟ್ಟೆಗೆ ಕಲ್ಪಿಸಬೇಕು. ಮಂಗಳೂರಿನಲ್ಲಿ ಸ್ವ ಸಹಾಯ ಸಂಘಗಳ ಮೂಲಕ 2 ಖಾದಿ ಬಟ್ಟೆ ನಿರ್ಮಾಣ ಘಟಕಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.

ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಬಿ.ನಟೇಶ್ ಪ್ರಸ್ತಾವಿಕವಾಗಿ ಮಾತನಾಡಿ, ಈ ಉತ್ಸವದಲ್ಲಿ ಒಟ್ಟು 66 ಮಳಿಗೆಗಳನ್ನು ತೆರೆಯಲಾಗಿದೆ. ಖಾದಿ ಸಂಘ ಸಂಸ್ಥೆಗಳು ಉತ್ಪಾದಿಸಿದ ಅರಳೆಖಾದಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು, ಪಾಲಿವಸ್ತ್ರ ಹಾಗೂ ಖಾದಿಯ ವೈವಿಧ್ಯಮಯ ಬಟ್ಟೆಗಳು ವಿವಿಧ ವಿನ್ಯಾಸಗಳಲ್ಲಿ ಜೋಡಿಸಲಾಗಿದೆ. ಕರಾವಳಿಯಲ್ಲಿ ಯುವಕರು ಖಾದಿ ಘಟಕಗಳನ್ನು ನಿರ್ಮಾಣ ಮಾಡುವ ಮೂಲಕ ಉದ್ಯಮ ಆರಂಭಿಸಲು ಸರ್ಕಾರದಿಂದ ಶೇ.20ರಷ್ಟು ಸಬ್ಸಿಡಿ ಸಹಿತ ವಿವಿಧ ಸೌಲಭ್ಯಗಳಿವೆ ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಕಚೇರಿಯ ಅಧಿಕಾರಿ ಆರ್. ಯೋಗೇಶ್ ಉಪಸ್ಥಿತರಿದ್ದರು. ಮಂಡಳಿಯ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತ್ ವಂದಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು.