ಮೈಸೂರು: ನಾಡಹಬ್ಬ ದಸರಾಕ್ಕೆ ಯುವ ದಸರಾದ ಸಂಭ್ರಮ ರಂಗು ತಂದಿದ್ದಲ್ಲದೇ ಯುವ ಜನತೆಯನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.
ಇದೇ ಪ್ರಥಮ ಬಾರಿಗೆ ನಗರದ ಹೊರ ವಲಯದ ವಿಶಾಲ ಬಯಲು ಪ್ರದೇಶದಲ್ಲಿ ಆಯೋಜಿಸಿದ್ದ ಯುವ ದಸರಾದ ಮೊದಲ ದಿನ ಕಿಕ್ಕಿರಿದು ಸೇರಿ ಸಂಭ್ರಮಿಸಿದರು.
ಖ್ಯಾತ ಗಾಯಕಿ ಶ್ರೇಯಾ ಘೋಷಾಲ್, ಕನ್ನಡದ ಗಾಯಕ ವಾಸುಕಿ ವೈಭವ್ ಹಾಡುಗಳಿಗೆ ನೆರೆದಿದ್ದವರು ಕುಣಿದು ಕುಪ್ಪಳಿಸಿದಲ್ಲದೇ, ಚಪ್ಪಾಳೆ, ಸಿಳ್ಳೆಯ ಮೆಚ್ಚುಗೆ ವ್ಯಕ್ತಪಡಿಸಿ ಸಂಭ್ರಮಿಸಿದರು.
ಶ್ರೇಯಾ ಘೋಷಲ್ ಅವರ ಕಂಠಸಿರಿಯಲ್ಲಿ ಹೊರ ಹೊಮ್ಮಿದ ‘ಸುನ್ ರಹಾ ಹೇನ’ ಗೀತೆಯ ನಾಂದಿ ಹಾಡಿ, ಕನ್ನಡದ ಚಕ್ರವರ್ತಿ ಚಿತ್ರದ ‘ಒಂದು ಮಳೆ ಬಿಲ್ಲು’, ಕೊಟ್ಟಿಗೊಬ್ಬ ಚಿತ್ರದ ‘ಸಾಲುತಿಲ್ಲವೇ, ಸಾಲುತ್ತಿಲ್ಲವೇ’ ಸಂಜು ವೆಡ್ಸ್ ಗೀತಾ ಚಿತ್ರದ ‘ಗಗನವೇ ಬಾಗಿ’ ಹಾಡುಗಳಿಗೆ ಇಡೀ ಬಯಲಲ್ಲಿ ಕೇಕೆ ಮಾರ್ಧನಿಸಿತು.
ಮೈಸೂರಿಗೆ ಬರಲು ಕಾಯುತ್ತಿದ್ದೆ. ಬಹಳ ವರ್ಷದ ಮೇಲೆ ದಸರಾಗೆ ಬಂದಿರುವುದು ಸಂಸತ ತಂದಿದೆ. ನಾನು ಸರಿಯಾಗಿ ಹಾಡುತ್ತಿದ್ದೇನೆಯೇ ಎಂದು ಪ್ರಶ್ನಿಸಿದಾಗ ಜೋರು ಕೇಕೆ, ಸಿಳ್ಳೆಯ ಪ್ರತಿಕ್ರಿಯೆ ಪ್ರೇಕ್ಷಕರಿಂದ ಬಂತು.
ಕನ್ನಡದ ಖ್ಯಾತ ಹಿನ್ನಲೆ ಗಾಯಕ ವಾಸುಕಿ ವೈಭವ್ ತಂಡದಿಂದ ಕಿರಿಕ್ ಪಾರ್ಟಿ ಚಿತ್ರದ ಕಾಗದದ ದೋಣಿಯಲ್ಲಿ ಗೀತೆಯ ಮೂಲಕ ಪ್ರಾರಂಭಿಸಿ, ಕಾಣದಂತೆ ಮಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎಂದು ಪುನೀತ್ ರಾಜ್ ಕುಮಾರ್ ಅವರನ್ನು ಮೈಸೂರು ಜನತೆಯ ಧ್ವನಿಯಲ್ಲಿ ಜತೆಗೂಡಿಸಿದರು, ಬಡವ ರಾಸ್ಕಲ್ ಚಿತ್ರದ ಬಂದು ನಮ್ಮೊನೋ ಕಮಾನ್ ಮ್ಯಾನು ಗೀತೆಯ ಮೂಲಕ ಸ್ನೇಹದ ಶ್ರೀಮಂತಿಕೆಯನ್ನು ಹಂಚಿ ಶಿಳ್ಳೆ ಚಪ್ಪಾಳೆ ಮೂಲಕ ಮೈಸೂರು ಜನತೆಯ ಪ್ರೀತಿ ಪಡೆದರು.
ಕನ್ನಡ ಹಾಗೂ ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಯುವ ದಸರಾವನ್ನು ರಂಗೇಸಿರಿ ನಿರೀಕ್ಷೆಗೂ ಮೀರಿದ ಹಾಡುಗಳ ಉಣ ಬಡಿಸಿದರು.
ಪ್ರತಿ ಹಾಡುಗಳಿಗೆ ಸಂಗೀತ ರಸಿಕರು, ಯುವ ಸಮೂಹವು ಸಂಗೀತದ ಜತೆಯಲ್ಲಿ ಕುಣಿದು ಕುಪ್ಪಳಿಸಿ ಯುವ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಒಂದು ಭಾಗವಾಗಿ ಕಂಡು ಬಂದಿತು. ಕನ್ನಡಿಗರು, ಸಂಗೀತ ಪ್ರೀಯರು ಕನ್ನಡ ಚಿತ್ರ ಗೀತೆಗಳಿಗೆ ಗಾಯಕಿಯ ಕಂಠ ಸಿರಿಗೆ ಮಾರುಹೋದರು.
ಉದ್ಘಾಟನೆಯ ಆರಂಭದಲ್ಲಿ ಮೊದಲ ಗೀತೆಯಾಗಿ ಕೆಜಿಎಫ್ ಚಿತ್ರದ ನಾನು ಬಳ್ಳಿಯ ಮಿಂಚು, ರಾಬರ್ಟ್ ಚಿತ್ರದ ಬೇಬಿ ಡ್ಯಾನ್ಸ್ ಫ್ರೋರ್ ರೆಡಿ, ಸುಂಟರಗಾಳಿ ಚಿತ್ರದ ಗೀತೆ ಹೀಗೆ ವಿವಿಧ ಗೀತೆಗಳಿಗೆ ಜಾನ್ವಿ ರಾಯಲ್ ಮತ್ತು ತಂಡ ಕುಣಿದು ಕುಪ್ಪಳಿಸಿ ಯುವಕರ ಮೈ ನವಿರೇಳಿಸಿತು.
ಚಿತ್ರರಂಗದ ಟಗರು ಪುಟ್ಟಿ ಎಂದೇ ಖ್ಯಾತಿಯನ್ನು ಪಡೆದ ಮಾನ್ವಿತಾ ಮತ್ತು ತಂಡದಿಂದ ಭೀಮಾ ಚಿತ್ರದ ಬ್ಯಾಡ್ ಬಾಯ್ಸ, ಟಗರು ಚಿತ್ರದ ಮೆಂಟಲ್ ಹೋ ಜಾವ, ಕರಟಕ ಧಮನಕ. ಚಿತ್ರದ ಹಿತ್ತಲಕ ಕರಿಬೇಡ ಮಾವ ಗೀತೆಗಳಿಗೆ ನೃತ್ಯವನ್ನು ಮಾಡಿ ಯುವಕರನ್ನು ರಂಜಿಸಿದರು.
ನಿರೀಕ್ಷೆಗೂ ಮೀರಿದ ಜನ
ಯುವ ದಸರಾವನ್ನು ಇದೇ ಪ್ರಥಮ ಬಾರಿಗೆ ನಗರದ ಹೊರ ವಲಯದಲ್ಲಿ ಸಂಘಟಿಸಿದರೂ, ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು.
ಪ್ರತಿ ವರ್ಷ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಯುವ ದಸರಾಕ್ಕೆ ವರ್ಷದಿಂದ ವರ್ಷಕ್ಕೆ ದಸರಾದ ಆಕರ್ಷಣೆ ಹೆಚ್ಚಿಸುತ್ತಾ ಬಂದಿದೆ. ಅಲ್ಲದೆ ಯುವ ದಸರಾಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚ್ಚುತ್ತಿರುವುದರಿಂದ ಹೆಚ್ಚು ಜನ ವೀಕ್ಷಿಸುವ ಉದ್ದೇಶದಿಂದ ಉತ್ತನಹಳ್ಳಿ ಬಳಿಯ ಬಯಲಿನಲ್ಲಿ ಈ ಬಾರಿ ಯುವ ದಸರಾ ಆಯೋಜಿಸಲಾಗಿದೆ.
ಆರಂಭದಲ್ಲಿ ಪ್ರೇಕ್ಷಕರು ಬರಲು ಹಿಂದೇಟು ಹಾಕಬಹುದು ಎನ್ನುವ ಸಣ್ಣ ಅನುಮಾನ ಸಂಘಟಕದಲ್ಲಿ ಬಂದರೂ, ಅವರ ಅನುಮಾನ ಹೋಗಲಾಡಿಸುವಂತೆ ತಮ್ಮ ಸ್ವಂತ ವಾಹನಗಳಲ್ಲಿಯೇ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಅಗಮಿಸಿ ಯುವ ದಸರಾ ಪ್ರೋತ್ಸಾಹಿಸಿದರು.
ಒಳ ಹೋಗಲು ಹರಸಾಹಸ ಲಘು ಲಾಠಿ ಪ್ರಹಾರ
ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಯುವ ದಸರಾಕ್ಕೆ ಆಗಮಿಸಿದ್ದರಿಂದ ಒಳ ಹೋಗಲು ನೂಕು ನುಗ್ಗಲು ಉಂಟಾಯಿತು. ಒಂದೊಂದು ಬಾಕ್ಸ್‌ಗಳನ್ನು ಮಾಡಿದ್ದು, ಅದರ ಒಳಗೆ ಹೋಗಲು ಜನರು ಹರಸಾಹಸ ಪಡಬೇಕಾಯಿತು.
ಗಣ್ಯರು, ಅತಿ ಗಣ್ಯರು ಹೋಗುವ ದ್ವಾರದಲ್ಲಿಯೂ ಜನರು ಕಿಕ್ಕಿರಿದು ತುಂಬಿದ್ದರಿಂದ ನಿಯಂತ್ರಿಸಲು ಪೊಲೀಸರು, ಹರಸಾಹಸಪಡಬೇಕಾಯಿತು. ಅತಿ ಗಣ್ಯರ ಪ್ರವೇಶ ದ್ವಾರದ ಬಳಿ ಒಳ ನುಗ್ಗಲಾಗಿ ಗುಂಪಿನ ಮೇಲೆ ಲಘು ಲಾಠಿ ಪ್ರಹಾರವೂ ನಡೆಯಿತು.
ಯುವ ದಸರಾದ ವೇದಿಕೆ ಅತಿ ದೂರದಲ್ಲಿ ಇರುವುದರಿಂದ ಸರಿಯಾಗಿ ಕಾಣಿಸುತ್ತಿಲ್ಲ ಎನ್ನುವ ದೂರು ಇತ್ತು. ಹೀಗಾಗಿ ಕೆಲವರು ಸೌಂಡ್‌ಬಾಕ್ಸ್ ಇಡಲು ನಿರ್ಮಿಸಿರುವ ಸ್ಟಾೃಂಡ್ ಏರಿ ಕಾರ್ಯಕ್ರಮ ವೀಕ್ಷಿಸಿದರು. ಅಲ್ಲಲ್ಲಿ ಎಲ್‌ಇಡಿ ದೊಡ್ಡ ಪರದೆಗಳನ್ನು ಹಾಕಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.
ಯುವ ದಸರಾದಲ್ಲಿ ಟ್ರಾಫಿಕ್ ಜಾಮ್
ಯುವ ದಸರಾಕ್ಕೆ ಜನರು ನೂಕು ನುಗ್ಗಲು ಇದ್ದರಿಂದ ಉತ್ತನಹಳ್ಳಿಯ ರಿಂಗ್‌ರಸ್ತೆಯಲ್ಲಿ ವಾಹನಗಳು ದಟ್ಟಣೆ ಹೆಚ್ಚಾಗಿತ್ತು. ಅಲ್ಲದೇ ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡಿದ್ದರಿಂದ ಇತರೆ ವಾಹನಗಳು ಸಂಚರಿಸಲು ಪರದಾಡಬೇಕಾಯಿತು.
ಮೊಬೈಲ್ ಬೆಳಕಿನ ನಮನ
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕಣ್ಮರೆಯಾಗಿ ಹಲವು ವರ್ಷ ಕಳೆದರೂ ಇನ್ನು ಜನ ಮಾನಸದಲ್ಲಿ ಉಳಿದಿದ್ದಾರೆ ಎನ್ನುವುದಕ್ಕೆ ಯುವ ದಸರಾ ಸಾಕ್ಷಿಯಾಯಿತು.
ಯುವ ದಸರಾಕ್ಕೆ ಪುನೀತ್ ಪತ್ನಿ ಅಶ್ವಿನಿ ಅವರು ಚಾಲನೆ ನೀಡಿದಾಗ, ಬೊಂಬೆ ಹೇಳುತೈತೆ ಹಾಡು ಬಂದಾಗ ಪ್ರೇಕ್ಷಕರು ತಮ್ಮ ಮೊಬೈಲ್ ಟಾರ್ಚ್ ಬೆಳಗಿಸಿ ಅಭಿಮಾನ ಮೆರೆದರು.