ದೇವದುರ್ಗ: ದೇವರನಾಡು ದೇವದುರ್ಗದಲ್ಲಿ ಶರಣರು, ದಾರ್ಶನಿಕರು ನೆಲೆಸಿ ಅಧ್ಯಾತ್ಮ ಬೋಧನೆ ಮಾಡಿ ಜನರಿಗೆ ಸನ್ಮಾರ್ಗ ತೋರಿದ್ದಾರೆ. ದೇವರ ನಾಡು ಇಂದು ಸಾಹಿತ್ಯ ನಾಡಾಗಿ ಬದಲಾಗುತ್ತಿದ್ದು ಪುಸ್ತಕ ಕೃಷಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಮ್ಮಾಪುರ ಮಹಾಂತೇಶ್ವರ ಮಠದ ಡಾ.ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಬೆಟ್ಟದ ಬಸವ ಪ್ರಕಾಶನದಿಂದ ಆಯೋಜಿಸಿದ್ದ ಬಸವರಾಜ ಮಡಿವಾಳ ರಚಿಸಿದ ‘ದಿನದ ದೀವಿಗೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಭಾನುವಾರ ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ಈ ನಾಡಿಗೆ ಆಗಮಿಸಿ ಇಲ್ಲಿನ ಜನರಿಗೆ ವಚನಗಳ ಬೋಧಿಸಿದ್ದರು. ದೇವದುರ್ಗ ದೇವರನಾಡಾಗಿ ಅಧ್ಯಾತ್ಮ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ಸಾಹಿತ್ಯವಲಯಕ್ಕೆ ತನ್ನದೇ ಕೊಡುಗೆ ನೀಡಿದೆ.
ಆದರೆ, ಇಂದಿನ ಯುವಜನತೆ ಸಾಮಾಜಿಕ ಜಾಲತಾಣ, ಫ್ಯಾಷನ್ ಹೆಸರಿನಲ್ಲಿ ಹಾಳಾಗುತ್ತಿರುವುದು ಕಳವಳಕಾರಿ ಸಂಗತಿ. ಯುವಕರು ಮೊಬೈಲ್, ಟಿವಿ, ಸಿನಿಮಾ ಮೋಜಿಗೆ ದಾಸರಾಗಿದ್ದರೆ. ಈ ಬಗ್ಗೆ ಯುವಕರಿಗೆ ಜಾಗೃತಿ ಮೂಡಿಸುವುದು ಅಗತ್ಯ. ಯುವಕರು ಜಾಲತಾಣ ಬಿಟ್ಟು ಪುಸ್ತಕ ಕೈಗೆತ್ತಿಕೊಂಡರೆ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು.
ಶಾಸಕಿ ಕರೆಮ್ಮ ನಾಯಕ ಮಾತನಾಡಿ, ಸಾಹಿತ್ಯ ವಲಯಕ್ಕೆ ದೇವದುರ್ಗ ಅನೇಕ ಕೊಡುಗೆ ನೀಡಿದೆ. ಶರಣ ಸಾಹಿತ್ಯ, ದಾಸ ಸಾಹಿತ್ಯದ ಜತೆ ಈಗ ನವಯುಗ ಸಾಹಿತ್ಯ ನೀಡುತ್ತಿದೆ. ಬಸವರಾಜ ಮಡಿವಾಳ ಉತ್ತಮ ಪುಸ್ತಕ ರಚಿಸಿದ್ದು ಯುವಕರು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಜಾಲತಾಣದ ಹಿಂದೆ ಓಡಾದೆ, ಸಾಹಿತ್ಯ, ಪುಸ್ತಕ ಓದು ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಸಾಹಿತಿ ವೀರಹನುಮಾನ ಪುಸ್ತಕ ಬಿಡುಗಡೆ ಮಾಡಿದರು. ಚಂದ್ರಶೇಖರ ಚಿಕ್ಕಬೂದೂರು ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಚನ್ನಬಸವ ಹಿರೇಮಠ, ಪುಸ್ತಕ ರಚನೆಕಾರ ಬಸವರಾಜ ಮಡಿವಾಳ, ಟಿಎಚ್‌ಒ ಡಾ.ಬನದೇಶ್ವರ, ಪ್ರಮುಖರಾದ ಶರಣಗೌಡ ಸುಂಕೇಶ್ವರಹಾಳ, ಬಾಬು ಅಲಿ ಕರಿಗುಡ್ಡ, ಮೈನುದ್ದೀನ್ ಕಾಟಮಳ್ಳಿ, ಸವಿತಾ ದೇವರಾಜ ಇತರರಿದ್ದರು.