ಜಿಲ್ಲೆ

ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಮದ್ದೂರು: ತಾಲೂಕಿನ ಸೋಮನಹಳ್ಳಿ ಬಳಿ ಶುಕ್ರವಾರ ತಡರಾತ್ರಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ತಾಲೂಕಿನ ವಡ್ಡರದೊಡ್ಡಿಯ ಅರುಣ್ (30) ಹತ್ಯೆಗೀಡಾದವನು. ಈತ ಬೆಂಗಳೂರಿನಲ್ಲಿ ಆಟೋ ಡ್ರೈವರ್ ಆಗಿದ್ದು, ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಸ್ವಗ್ರಾಮ ವಳೆಗೆರೆದೊಡ್ಡಿಗೆ ಬಂದಿದ್ದ ಎನ್ನಲಾಗಿದೆ. ಶುಕ್ರವಾರ ರಾತ್ರಿ 9.30ರಲ್ಲಿ ಅರುಣ್ ಮತ್ತು ಆತನ ಸ್ನೇಹಿತರು ಸೋಮನಹಳ್ಳಿ ಬಳಿಯ ಎಂ.ಟಿ.ಆರ್. ಬಾರ್‌ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವೇಳೆ ಹಳೇ ವಿಚಾರಕ್ಕೆ ಪರಸ್ಪರ ಜಗಳ ಉಂಟಾಗಿದೆ. ಬಳಿಕ ಬಾರ್‌ನಿಂದ ಸಿಬ್ಬಂದಿ ಎಲ್ಲರನ್ನು ಹೊರಗಡೆ ಕಳುಹಿಸಿದ್ದಾರೆ.

ಅರುಣ್ ಸ್ವಗ್ರಾಮ ವಡ್ಡರದೊಡ್ಡಿಗೆ ತೆರಳುವ ವೇಳೆ ಸೋಮನಹಳ್ಳಿ ಬಳಿಯ ಸ್ಕಂದ ಲೇಔಟ್ ಬಳಿ ಎಂಟರಿಂದ ಹತ್ತು ಮಂದಿ ಇದ್ದ ಗುಂಪು ಅರುಣ್ ಮೇಲೆ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಿಪಿಐ ವೆಂಕಟೇಗೌಡ ಹಾಗೂ ಕೆಸ್ತೂರು ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.