ನಂಜನಗೂಡು : ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಕಬಿನಿ ಹತ್ವಾಳ್ ಕಟ್ಟೆಯಲ್ಲಿ ಈಜಲು ಹೋದ ಯುವಕ ಜಲಸಮಾಧಿಯಾಗಿದ್ದಾನೆ.
ಗ್ರಾಮದ ನಜೀರ್ ಅಹ್ಮದ್ ಎಂಬುವವರ ಪುತ್ರ ಸಲ್ಮಾನ್(22) ಮೃತ ದುರ್ದೈವಿ. ಹುಲ್ಲಹಳ್ಳಿಯ ಕಬಿನಿ ಹತ್ವಾಳ್ ಕಟ್ಟೆಯಲ್ಲಿ ಭಾನುವಾರ ಮಧ್ಯಾಹ್ನ ಈಜಾಡಲು ಮೂವರು ಯುವಕರು ತೆರಳಿದ್ದಾರೆ. ಈಜಾಡುತ್ತಿದ್ದ ವೇಳೆ ಹಾಳ ಇರುವುದನ್ನು ತಿಳಿಯದೆ ಮೂವರಲ್ಲಿ ಸಲ್ಮಾನ್ ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಭಾನುವಾರ ಸಂಜೆ ಅಗ್ನಿಶಾಮಕ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಲ್ಮಾನ್ ಪತ್ತೆಯಾಗಿರಲಿಲ್ಲ. ಸೋಮವಾರ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತ ಯುವಕನ ಶವಕ್ಕಾಗಿ ಶೋಧ ನಡೆಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಸಹ ಕಬಿನಿ ಹತ್ವಾಳ್ ಕಟ್ಟೆ ಯ್ಲಲಿ ಈಜಲು ಹೋಗಿ 5ರಿಂದ 6 ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರಗೆ ತಡೆಗೋಡೆ ನಿರ್ಮಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಕಬಿನಿ ಹತ್ತು ಕಟ್ಟೆಯ ಬಳಿ ತಡೆ ಗೋಡೆ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.