ಜಿಲ್ಲೆ

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ಕೆಲಸದ ವೇಳೆ ಅವಘಡ

ಗೌರಿಬಿದನೂರು: ತಾಲೂಕಿನ ಕಾಟಿನಕಲ್ಲು ಗ್ರಾಮದಲ್ಲಿ ವಿದ್ಯುತ್ ಗುತ್ತಿಗೆದಾರನ ಜತೆ ಕೆಲಸಕ್ಕೆಂದು ತೆರಳಿದ್ದ ಯುವಕನಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ನಾಮಗೊಂಡ್ಲು ಗ್ರಾಮದ ಅಗಸರಪೇಟೆಯ ಶ್ರೀರಾಮಪ್ಪ ಅವರ ಪುತ್ರ ಎನ್.ಎಸ್.ಅಭಿಲಾಷ್(21) ಮೃತ. ಪದವಿ ಮುಗಿಸಿದ್ದ ಈತ ಬಿಡುವಿನ ವೇಳೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಸೋಮವಾರ ವಿದ್ಯುತ್ ಗುತ್ತಿಗೆದಾರನ ಜತೆ ಕಾಟಿನಕಲ್ಲು ಬಳಿ 11 ಕೆವಿ ವಿದ್ಯುತ್ ಸಂಪರ್ಕದ ಕೆಲಸಕ್ಕೆಂದು ಹೋಗಿದ್ದ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗ್ರಾಮಸ್ಥರ ಪ್ರತಿಭಟನೆ

ಸುರಕ್ಷತಾ ಕ್ರಮ ತೆಗೆದುಕೊಳ್ಳದೆ ಕೆಲಸ ಮಾಡುತ್ತಿರುವುದರಿಂದ ಪದೇ ಪದೆ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಭಿಲಾಷ್ ಸಾವಿಗೆ ಬೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೇದಾರರೇ ಹೊಣೆಗಾರರು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.