ಕುದೂರು: ರಾಷ್ಟ್ರೀಯ ಹೆದ್ದಾರಿ 75ರ ತಿಪ್ಪಸಂದ್ರ ಹೋಬಳಿಯ ರಸ್ತೆಪಾಳ್ಯದ ಬಳಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಅತಿ ವೇಗವಾಗಿ ಬಂದ ಅನಾಮಧೇಯ ಕಾರು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ.
ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಶಿವರಾಜ (22) ಮೃತಪಟ್ಟ ದುರ್ದೈವಿ. ಹಿಂಬದಿ ಸವಾರ ಹೆಗ್ಗನಹಳ್ಳಿಯ ರುದ್ರೇಶ ಗಾಯಗೊಂಡ ವ್ಯಕ್ತಿ.
ಕಚೇರಿಗೆ ರಜೆಯಿದ್ದ ಕಾರಣ ಬೆಂಗಳೂರಿನಿಂದ ತಿಪಟೂರು ತಾಲ್ಲೂಕಿನ ಮಸವನಘಟ್ಟ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 75ರ ರಸ್ತೆಪಾಳ್ಯ ಬಳಿ ಹೋಗುವಾಗ ಹಿಂದಿನಿಂದ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದಿದ್ದಾರೆ. ವಾಹನ ಸವಾರನ ತಲೆಯ ಮೇಲೆ ಕಾರು ಹತ್ತಿಸಿಕೊಂಡು ಹೋಗಿದೆ. ತೀವ್ರ ರಕ್ತಸ್ರಾವದಿಂದ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಿಂಬದಿ ಸವಾರ ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ