ಚನ್ನಪಟ್ಟಣ
ತಾಲೂಕಿನ ಬ್ರಹ್ಮಣೀಪುರ ಹಾಗೂ ಚಿಕ್ಕವಿಠಲೇನಹಳ್ಳಿ ರಸ್ತೆಯಲ್ಲಿ ಗುರುವಾರ ರಾತ್ರಿ ಟ್ರಾಕ್ಟರ್ ಪಲ್ಟಿಯಾಗಿ ದೊಡ್ಡನಹಳ್ಳಿ ಗ್ರಾಮದ ಶರತ್ (28) ಎಂಬ ಯುವರೈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗ್ರಾಮದ ಚಿಕ್ಕರಾಜು ಎಂಬುವವರು ಮಾವು ಬೆಳೆಗಾರರಾಗಿದ್ದು, ಅವರ ಮಗನಾದ ಶರತ್, ತಮ್ಮ ತೋಟದ ಮಾವುಗಳನ್ನು ಗುರುವಾರ ಸಂಜೆ ತಮ್ಮ ಟ್ರಾಕ್ಟರ್‌ನಲ್ಲಿ ತುಂಬಿಸಿಕೊಂಡು ಚನ್ನಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಲು ಬಂದಿದ್ದರು.
ಎಪಿಎಂಪಿಯಲ್ಲಿ ಮಾವು ಮಾರಾಟ ಮಾಡಿ ರಾತ್ರಿ ಗ್ರಾಮಕ್ಕೆ ಹಿಂದಿರುಗುವಾಗ ಬ್ರಹ್ಮಣೀಪುರ –ವಿಠಲೇನಹಳ್ಳಿ ರಸ್ತೆಯಲ್ಲಿ, ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಾಕ್ಟರ್ ರಸ್ತೆಯ ಪಕ್ಕದ ಇಂಗುಗುಡಿಗೆ ಪಲ್ಟಿಯಾಗಿದೆ. ಅಡಿಯಲ್ಲಿ ಸಿಲುಕಿದ ಶರತ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಮತ್ತೋರ್ವ ಯುವಕ ಟ್ಯಾಕ್ಟರ್ ನಿಂದ ಜಿಗಿದು ಪಾರಾಗಿದ್ದಾರೆ. ಘಟನೆ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.