ಜಿಲ್ಲೆ

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಲೋಕೇಶ್ ಮನು. ಡಿ

ಕೊಳ್ಳೇಗಾಲ: ಪ್ರೀತಿಸಿದ ಹುಡುಗಿ ಸಿಗದ ಕಾರಣ ತಾಲೂಕಿನ ಜಾಗೇರಿಯ ಪಾಸ್ಕಲ್ ನಗರದಲ್ಲಿ ಯುವಕ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸೇತುರಾಜ್ ಅವರ ಪುತ್ರ ವಿಜುಜಾನ್ಸನ್( 22) ಆತ್ಮಹತ್ಯೆ ಮಾಡಿಕೊಂಡ ಯುವಕ.

ಈತ ಗ್ರಾಮದ ಯುವತಿಯೊಬ್ಬಳನ್ನು 2 ವರ್ಷದಿಂದ ಪ್ರೀತಿಸುತ್ತಿದ್ದ. ಏ.3ರಂದು ಯುವತಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರೀತಿಸುವುದಾಗಿ ಪೀಡಿಸುತ್ತಿದ್ದಾನೆ ಎಂದು ದೂರು ನೀಡಿದ್ದಳು. ಈ ಹಿನ್ನ್ನೆಲೆ ಪೊಲೀಸರು ಆತನನ್ನು ಕರೆಯಿಸಿ ಬುದ್ಧಿವಾದ ಹೇಳಿದ್ದರು. ಗ್ರಾಮದಲ್ಲೂ ಎರಡು ಕುಟುಂಬ ನಡುವೆ ಈ ಬಗ್ಗೆ ಮಾತುಕತೆ ನಡೆದು, ಹುಡುಗಿ ತಂಟೆಗೆ ಹೋಗದಂತೆ ವಿಜುಜಾನ್ಸನ್‌ಗೆ ತಿಳಿ ಹೇಳಲಾಗಿತ್ತು. ಆದರೆ ದುರದೃಷ್ಟವಶಾತ್ ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ಗ್ರಾಮದ ಜಮೀನೊಂದರ ಹುಣಸೆ ಮರಕ್ಕೆ ವಿಜು ಜಾನ್ಸನ್ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸೈ ಸುಪ್ರೀತ್ ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹವನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.