ಜಿಲ್ಲೆ

‘ಯು-ವಿನ್’ ಪೋರ್ಟಲ್ ಪ್ರಾಯೋಗಿಕ ಆರಂಭ

ಹುಬ್ಬಳ್ಳಿ : ಗರ್ಭಿಣಿಯರು ಹಾಗೂ ಮಕ್ಕಳಿಗೆ ನಿಗದಿತ ಸಮಯಕ್ಕೆ ಲಸಿಕೆ ಹಾಕುವುದನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ಪರಿಚಯಿಸಿದ್ದ ‘ಯು-ವಿನ್’ ಪೋರ್ಟ್​ಲ್ ಆಪ್ ಗುರುವಾರದಿಂದ ಧಾರವಾಡ ಜಿಲ್ಲೆಯಲ್ಲಿಯೂ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದೆ.

ಕೋವಿಡ್ ಸಮಯದಲ್ಲಿ ಜಾರಿಗೆ ತಂದಿದ್ದ ‘ಕೋ-ವಿನ್’ ಆಪ್​ನ ತದ್ರೂಪಿ ಆಪ್ ಇದಾಗಿದೆ. ಗರ್ಭಿಣಿ ಹಾಗೂ ನವಜಾತ ಶಿಶುಗಳು ಮೊದಲ ಲಸಿಕೆ ಹಾಕಿಸಿಕೊಂಡ ನಂತರ ಮುಂದಿನ ಲಸಿಕೆ ಯಾವ ಸಮಯದಲ್ಲಿ ಹಾಕಿಸಿಕೊಳ್ಳಬೇಕು ಎಂಬುದನ್ನು ಅರಿಯಲು ಈ ಆಪ್ ಸಹಾಯವಾಗಲಿದೆ.

ಈ ಮೊದಲು ಗರ್ಭಿಣಿಯರು ಹಾಗೂ ಮಕ್ಕಳಿಗೆ ಯಾವ ಸಮಯಕ್ಕೆ ಲಸಿಕೆ ಹಾಕಬೇಕು ಎಂಬುದನ್ನು ಪ್ರಾಥಮಿಕ ಸುರಕ್ಷಣಾ ಅಧಿಕಾರಿಗಳು ಲಿಖಿತ ದಾಖಲೆಗಳನ್ನು ಇಟ್ಟುಕೊಳ್ಳುತ್ತಿದ್ದರು.

ಇನ್ನು ಮುಂದಿನ ದಿನಗಳಲ್ಲಿ ಲಿಖಿತ ದಾಖಲೆ ಬದಲು ಪ್ರತಿ ಬಾರಿ ಚುಚ್ಚುಮದ್ದು ಹಾಕಿದ ಸಂದರ್ಭದಲ್ಲಿ ಈ ಆಪ್​ನಲ್ಲಿ ವಿವರಗಳನ್ನು ದಾಖಲೆ ಮಾಡಿದರೆ ಸಾಕು, ಮುಂದಿನ ಲಸಿಕೆಯ ದಿನವನ್ನು ಸರಳವಾಗಿ ಕಂಡುಕೊಳ್ಳಬಹುದು.

ಗರ್ಭಿಣಿಯ ಆಧಾರ್ ಕಾರ್ಡ್ ಅಥವಾ ಮಗುವಿನ ತಂದೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ಈ ಪೋರ್ಟಲ್​ನಲ್ಲಿ ನೋಂದಾಯಿಸಿ, ಲಸಿಕೆಯ ವಿವರಗಳನ್ನು ದಾಖಲಿಸಿದರೆ ಸಾಕು. ಲಸಿಕೆಯ ಮುಂದಿನ ದಿನಾಂಕವನ್ನು ಸರಳವಾಗಿ ತಿಳಿದುಕೊಳ್ಳಬಹುದು. ಇದರಿಂದ ಗರ್ಭಿಣಿ ಅಥವಾ ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ದೊರೆಯಲು ಸಹಾಯವಾಗುತ್ತದೆ.

ಲಸಿಕೆ ಪಡೆದುಕೊಳ್ಳುವ ಗರ್ಭಿಣಿ ಅಥವಾ ಮಕ್ಕಳ ಪೋಷಕರ ಮೋಬೈಲ್​ಗೂ ಲಸಿಕೆ ದಿನಾಂಕದ ಮಾಹಿತಿ ಲಭ್ಯವಾಗುತ್ತದೆ.

ಕೋ-ವಿನ್ ಪೋರ್ಟ್​ಲ್ ನಲ್ಲಿ ಗರ್ಭಿಣಿಯರು ಹಾಗೂ ಮಕ್ಕಳ ವಿವರ ದಾಖಲಿಸಿ, ಲಸಿಕೆ ಹಾಕುವ ಪರೀಕ್ಷಾರ್ಥ ಕಾರ್ಯವನ್ನು ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಈ ಮೊದಲು ಮಾಡಿತ್ತು. ಇದೀಗ ವಿವಿಧ ಜಿಲ್ಲೆಗಳಲ್ಲಿಯೂ ಪ್ರಾತ್ಯಕ್ಷಿಕೆ ಕಾರ್ಯ ಗುರುವಾರದಿಂದ ಆರಂಭಗೊಂಡಿದೆ.

ಪೋರ್ಟಲ್​ನಲ್ಲಿ ಗರ್ಭಿಣಿಯರ ಮತ್ತು ಮಕ್ಕಳ ಲಸಿಕೆ ವಿವರಗಳನ್ನು ದಾಖಲಿಸುವ ಬಗ್ಗೆ ಪ್ರಾಥಮಿಕ ಸುರಕ್ಷಣಾ ಅಧಿಕಾರಿಗಳಿಗೆ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ತರಬೇತಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ತರಬೇತಿ ನಂತರ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಪೋರ್ಟಲ್​ನ ಕಾರ್ಯವೈಖರಿ ಆರಂಭಗೊಳ್ಳಲಿದೆ.

ರಾಜ್ಯದಾದ್ಯಂತ ಎಷ್ಟು ಗರ್ಭಿಣಿಯರು ಅಥವಾ ಮಕ್ಕಳಿಗೆ ಯಾವ, ಯಾವ ಲಸಿಕೆ ಮಾಡಲಾಗಿದೆ, ಮುಂದಿನ ಲಸಿಕೆ ಯಾವುದು ಎಂಬುದನ್ನು ಈ ಪೋರ್ಟಲ್ ಮೂಲಕ ಸರಳವಾಗಿ ತಿಳಿದುಕೊಳ್ಳಬಹುದು. ಇದರಿಂದ ಮುಂದಿನ ಲಸಿಕೆ ಕೊರತೆಯಾಗದಂತೆಯೂ ನೋಡಿಕೊಳ್ಳಬಹುದಾಗಿದೆ ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು.