ಕಾರವಾರ:ಗುರಿ ಇಟ್ಟುಕೊಂಡು, ನಿರಂತರವಾಗಿ ಶ್ರಮಪಟ್ಟರೆ ಯಶಸ್ಸು ಸಾಧ್ಯ ಎಂದು ಖ್ಯಾತ ಪರ್ವತಾರೋಹಿ, ಕರ್ನಲ್ ರಣವೀರ್ ಸಿಂಗ್ ಜಾಮ್‌ವಾಲ್ ಹೇಳಿದರು.
ಮಲ್ಲಾಪುರದ ಕೈಗಾ ನೇಚರ್ ಕ್ಲಬ್, ರೀಡರ್ಸ್ ರೀಗಲ್ ಸಂಸ್ಥೆಯಿಂದ ಟೌನ್‌ಶಿಪ್‌ನ ಅಟೊಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಕೆಲಸದ ಬಗ್ಗೆ ಪೂರ್ವ ಯೋಜನೆ ಮಾಡಿಕೊಂಡು ನಿಗದಿತ ಸಮಯದಲ್ಲಿ ಆ ಕೆಲಸವನ್ನು ಮುಗಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಆಗ ಸಮಯ ನಿರ್ವಹಣೆ ಸಾಧ್ಯ.
ಮಾತ್ರವಲ್ಲ ಒತ್ತಡವೂ ಆಗುವುದಿಲ್ಲ. ನಿಮಗೆ ಮಾಡಲು ಹಲವು ಒಳ್ಳೆಯ ಕೆಲಸಗಳಿವೆ. ಮೊಬೈಲ್ ನೋಡುವ ಅವಧಿಯನ್ನು ಕಡಿಮೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ:ಪ್ರತಿ ರಾಜ್ಯದ ಅತಿ ಎತ್ತರದ ಸ್ಥಳದಲ್ಲಿ ತಿರಂಗಾ ಹಾರಾಟ
ನಮ್ಮ ಕನಸನ್ನು ನನಸು ಮಾಡಲು ರಾತ್ರಿ, ಹಗಲು ಶ್ರಮಿಸಬೇಕು. ಕುಂಟು ನೆಪ ಹೇಳಿ ಮಾಡುವ ಕಾರ್ಯವನ್ನು ಬಿಡಬಾರದು. ನಾನು ಪರ್ವತಾರೋಹಣ ಮಾಡುವಾಗ ಒಂದು ಬೆರಳು ಕಳೆದುಕೊಂಡೆ, ಕೈ ಮುರಿದುಕೊಂಡೆ.
ಹಿಮ ಪರ್ವತದಲ್ಲಿ 2 ಮೀ ಎತ್ತರದಲ್ಲಿ ಉಸಿರಾಟದ ಸಮಸ್ಯೆಯಾಯಿತು. ಆದರೂ ಜಗ್ಗಲಿಲ್ಲ. ಗುರಿ ಮುಟ್ಟುವವರೆಗೆ ಬಿಡಲಿಲ್ಲ. ಯಾರೂ ಮಾಡದ ಸಾಧನೆಯನ್ನು ನಾನು ಮಾಡುತ್ತೇನೆ ಎಂಬ ಛಲ ಬೇಕು ಎಂದರು.
ಪ್ರತಿ ವಿಚಾರದಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳಿರುತ್ತವೆ. ಆದರೆ, ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ. ಶಿಕ್ಷಕರಿಗೆ, ಮಾತಾ ಪಿತೃಗಳಿಗೆ ಗೌರವ ಕೊಡಿ.
ಮಾಡುವ ಕೆಲಸದಲ್ಲಿ ಶ್ರದ್ಧೆ, ಆಸಕ್ತಿ ಇಟ್ಟುಕೊಳ್ಳಿ ಇಡಿ ಆಗ ನಿಮಗೆ ನಿದ್ದೆ ತಾನೇ ಹಾರಿ ಹೋಗುತ್ತದೆ ಎಂದು ಬುದ್ಧಿಮಾತು ಹೇಳಿದರು.
ರೀಡರ್ಸ್ ರೀಗಲ್ ಸಂಸ್ಥೆಯ ಮುಖ್ಯ ಸಂಚಾಲಕ ಮುಖೇಶ ಪುರೋಹಿತ್, ವೇಣುಗೋಪಾಲ್, ಹರದೀಪ್ ಸಿಂಗ್, ಹರಿರಾಂ, ಜಿತೇಂದ್ರಕುಮಾರ್, ರವೀಂದ್ರ ಜೋಷಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಅಟೋಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಶ್ರೀಪ್ರಸಾದ ಗೋಖಲೆ, ಉಪ ಪ್ರಾಂಶುಪಾಲ ಸುಧೀರ ಕುಲ್ಲರ್, ಎನ್‌ಸಿಸಿ ಕಮಾಂಡರ್ ನಿಖಿಲ್ ವೇದಿಕೆಯಲ್ಲಿದ್ದರು.