ಬೆಂ.ಗ್ರಾಮಾಂತರ/ದಾಬಸ್ಪೇಟೆ: ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಗೆ ಕಡಿವಾಣ ಹಾಕಲು ಮುಂದಾಗಿರುವ ಕೆಲ ಸಂಘಟನೆಗಳು ನೀರಿನ ಖಾಲಿ ಬಾಟಲಿ ಕೊಟ್ಟರೆ ಠೇವಣಿ ಹಣ ವಾಪಸ್ ಎಂಬ ವಿನೂತನ ಜಾಗೃತಿ ರೂಪಿಸಿವೆ. ಅಂಗಡಿಗಳಲ್ಲಿ ಡಿಪಾಸಿಟ್ ಇಟ್ಟು ನೀರು ಪಡೆಯುವ ಯೋಜನೆ ಇದಾಗಿದ್ದು, ಸಾರ್ವಜನಿಕರಿಂದಲೂ ಸ್ಪಂದನೆ ವ್ಯಕ್ತವಾಗಿದೆ.
ಒಂದೆಡೆ ಚಾರಣಿಗರ ಫೇವರಿಟ್ ಎನಿಸಿರುವ ಶಿವಗಂಗೆಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಬಿಗಡಾಯಿಸುತ್ತಿದೆ. ಸ್ವಚ್ಛ ಸುಂದರ ಗಿರಿಧಾಮವನ್ನು ಪ್ಲಾಸ್ಟಿಕ್ಮುಕ್ತಗೊಳಿಸುವ ಸದುದ್ದೇಶದೊಂದಿಗೆ ಕೆಲವೊಂದು ಸಂಘಟನೆಗಳು ಈ ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ನೀರು ಕುಡಿದ ಬಳಿಕ ಎಲ್ಲೆಂದರಲ್ಲಿ ಖಾಲಿ ಬಾಟಲಿಗಳನ್ನು ಎಸೆಯುವ ಚಾಳಿ ತಪ್ಪಿಸಲು ಈ ಯೋಜನೆ ರೂಪಿಸಲಾಗಿದೆ.
ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿ ರಾಶಿ: ಬೆಟ್ಟ ಹತ್ತುವ ಪ್ರವಾಸಿಗರು ಸಾಮಾನ್ಯವಾಗಿ ದಾಹ ತಣಿಸಿಕೊಳ್ಳಲು ಅಂಗಡಿಗಳಲ್ಲಿ ನೀರಿನ ಬಾಟಲಿ ಖರೀದಿಸುತ್ತಾರೆ, ಬೆಟ್ಟ ಹತ್ತುತ್ತಿದಂತೆ ನೀರು ಖಾಲಿ ಮಾಡಿ ಎಲ್ಲೆಂದರಲ್ಲಿ ಎಸೆಯುತ್ತಾರೆ, ಕಡಿದಾದ ಬೆಟ್ಟದಲ್ಲಿ ಬಾಟಲಿಗಳು ಬೀಳುತ್ತಿದ್ದು, ನಿರ್ವಹಣೆ ಅಸಾಧ್ಯವಾಗಿದೆ. ದಿನೇದಿನೆ ಇದರ ಪ್ರಮಾಣ ಹೆಚ್ಚುತ್ತಿದ್ದು, ಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಖಾಲಿ ಬಾಟಲಿಗಳ ರಾಶಿಯೇ ಕಾಣುತ್ತಿದೆ.
ಏನಿದು ಹೊಸ ಯೋಜನೆ?: ಇಲ್ಲಿನ ಕೆಂಪೇಗೌಡ ಹಜಾರದಿಂದ ಆರಂಭವಾಗುವ ಅಂಗಡಿಗಳ ಸಾಲಿನಲ್ಲಿ ಒಂದೊಂದು ಅಂಗಡಿಯವರು ಒಂದೊಂದು ಸಂಖ್ಯೆಯ ಸ್ಟಿಕ್ಕರ್ಗಳನ್ನು ಇಟ್ಟುಕೊಂಡಿದ್ದಾರೆ. ಸಾರ್ವಜನಿಕರು ಖರೀದಿಸಿದ ನೀರಿನ ಬಾಟಲಿಗೆ ಆಯಾ ಅಂಗಡಿಯ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಆ ನೀರಿನ ಬಾಟಲಿಯ ದರಕ್ಕಿಂತ ಎರಡು ಪಟ್ಟು ಹಣ ಡಿಪಾಸಿಟ್ ಮಾಡಿಸಿಕೊಳ್ಳಲಾಗುತ್ತದೆ, ಚಾರಣ ಮುಗಿಸಿ ಬರುವ ಪ್ರವಾಸಿಗರು ಅದೇ ಅಂಗಡಿಗೆ ಬಾಟಲಿ ನೀಡಿ ಡಿಪಾಸಿಟ್ ಹಣ ವಾಪಸ್ ಪಡೆಯಬಹುದು.
ಶ್ರಮದಾನದ ಮೂಲಕ ಅರಿವು: ನನ್ ಮಿನಿ ರೇಡಿಯೋ, ಭರವಸೆ ತಂಡ, ಸ್ವಯಂ ಜಾಗೃತಿ ಸೇವಾ ಟ್ರಸ್ಟ್ ಹಾಗೂ ಇನ್ನಿತರ ಸಂಘಟನೆಯವರು ಶಿವಗಂಗೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು. 'ಶಿವಗಂಗೆಯಲ್ಲಿ ಸ್ವಚ್ಛತೆ ನಮ್ಮ ಆದ್ಯತೆ' ಎಂಬ ಘೋಷವಾಕ್ಯದ ಮೂಲಕ ಬೈಕ್ ಜಾಥಾ ನಡೆಸಿ, ಸ್ಥಳೀಯ ಅಂಗಡಿಯವರ ಮನವೊಲಿಸಿ ಖಾಲಿ ಬಾಟಲಿ ವಾಪಸ್ ಪಡೆಯುವ ಯೋಜನೆ ಬಗ್ಗೆ ಅರಿವು ಮೂಡಿಸಿದ್ದಾರೆ.
ವಿವಿಧ ಸಂಘಟನೆಗಳ ಪ್ರಾಯೋಗಿಕ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ, ಕೆಂಪೇಗೌಡ ಹಜಾರದಿಂದ ಆರಂಭವಾಗುವ ಅಂಗಡಿಗಳಿಂದ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ಅನುಷ್ಠಾನಗೊಳಿಸುವ ಮೂಲಕ ಪ್ಲಾಸ್ಟಿಕ್ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುವುದು.
|ರಮ್ಯಾ ಕಾರ್ಯನಿರ್ವಹಣಾಧಿಕಾರಿ, ಶಿವಗಂಗೆ
Unavailable on free accounts. Upgrade to redirect links.