ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ರೈತರು ಕೃಷ್ಣಾ ನದಿ ಹೆಚ್ಚುತ್ತಿರುವುದರಿಂದ ಪಂಪಸೆಟ್‌ಗಳನ್ನು ತೆಗೆಯುತ್ತಿರುವ ರೈತರು.  
ಜಿಲ್ಲೆ

ಜೀವ ಝಲ್ ಅನಾಕತೈತೀರಿ ಸಾಹೇಬ್ರ...!!

ತುಬಚಿ: ದೊಡ್ಡ ಹೊಳೆ ತುಂಬಿದರ ಹೊಟ್ಟೆ ತುಂಬತ್ತ ಅಂತ ನಮ್ಮ ಹಿರಿಯರ ಹೇಳತಿದ್ರರೀ. ಅದು ನಮಗೆ ಜೀವನದಿ ಅಂತು ಖರೇರಿ..ಆದರ ಮೂರು ನಾಲ್ಕು ವರ್ಷ ಆತರೀ. ಉಕ್ಕಿ ಹರಿದ್ರ ಜೀವ ಝಲ್ ಅನ್ನತ್ತರೀ.!!!

ಕೃಷ್ಣಾ ನದಿ ಪ್ರವಾಹದ ಆತಂಕಕ್ಕೆ ಸಿಲುಕಿರುವ ತುಬಚಿ, ಶೂರ್ಪಾಲಿ, ಕಂಕಣವಾಡಿ, ಜಂಬಗಿ ಕೆ.ಡಿ ಸೇರಿದಂತೆ ನದಿ ಪಾತ್ರದ ಗ್ರಾಮಸ್ಥರ ಒಡಲಾಳದ ನೋವಿನ ಕತೆಯಿದು. ಮಹಾರಾಷ್ಟ್ರದಲ್ಲಿ ಮಳೆ ಶುರುವಾದರ ಸಾಕರೀ ಸಾಹೇಬ್ರ ನಮ್ಮ ಎದೆಯೊಳಗ ಢವ ಢವ ಅನಾಕ ಶುರುವಾಗತರೀ. ಈಡೀ ಬದುಕು ಕೊಟ್ಟಕೊಂಡ ಸಾಗೋದರೊಳಗೆ ಸಾಕಾಗಿ ಹೋಗತ್ರಿ. ನಮಗೆ ಸರ್ಕಾರ ಕೊನೆಯ ದಿಕ್ಕು ತೋರಬೇಕು. ಇಲ್ಲಂದ್ರೇ ಭಗವಂತನ ಕಾಪಾಡಬೇಕು ಅಂತ ವಿಜಯವಾಣಿ ಎದುರು ತಮ್ಮ ಪ್ರವಾಹ ಆತಂಕ ಹೊರ ಹಾಕಿದರು.

ಬದುಕು ಹೈರಾಣ ಆಗಿಸುವ ಪ್ರವಾಹ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಮೈದುಂಬಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನೀರಿನಮಟ್ಟದಿಂದ ನದಿ ತೀರದ ಕೆಲ ಗ್ರಾಮಗಳಲ್ಲಿನ ಜನರಲ್ಲಿ ಪ್ರವಾಹ ಭೀತಿ ಮೂಡಿಸಿದೆ. 1.5 ಲಕ್ಷ ಕ್ಯೂಸೆಕ್ ಸಮೀಪ ಒಳ ಹರಿವು ಕಂಡು ಬರುತ್ತಿರುವ ಪರಿಣಾಮ ಬದುಕು ಹೈರಾಣ ಆಗಿಸಲಿದೆ ಅಂತ ನದಿ ತೀರದ ಗ್ರಾಮಸ್ಥರು ಸಂಕಟ ಪಡುತ್ತಿದ್ದಾರೆ. ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಬಿಟ್ಟಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಈಗ ಇರುವ ಉಳುಮೆ ಭೂಮಿ, ಜಾನುವಾರುಗಳ ರಕ್ಷಣೆಯ ಸವಾಲು ಎದುರಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನದಿಯ ಪ್ರವಾಹ ಬಂದರೆ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತದೆ. ರಾಜ್ಯ ಹಾಗೂ ಮಹಾರಾಷ್ಟ್ರ ಮಳೆಯ ಪರಿಣಾಮ ವಿವಿಧ ಗ್ರಾಮಗಳಲ್ಲಿ ನಿದ್ದೆಗೆಡಿಸಿದೆ.

ಅಧಿಕಾರಿಗಳ ಭೇಟಿ...

ಬುಧವಾರ ಕೃಷ್ಣಾ ನದಿ ದಡದಲ್ಲಿರುವ ತುಬಚಿ, ಶೂರ್ಪಾಲಿ ಮತ್ತು ಕಂಕನವಾಡಿ ಗ್ರಾಮಗಳಿಗೆ ಜಮಖಂಡಿ ಶ್ವೇತಾ ಬಿಡಿಕರ, ತಹಶೀಲ್ದಾರ ಅನಿಲ ಬಡಿಗೇರ, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಸಚಿನ ಮಾಚಕನೂರ, ಪ್ರಕಾಶ ಪವಾರ, ಈಶ್ವರ ಹೋಸಲ್ಕರ, ನೋಡಲ್ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಾಂತೇಶ ಹಲಗಿಮನಿ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಆಗುವ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟರು. ಸಾಹೇಬದ್ರ ನಮ್ಮನ ಕಾಪಾಡ್ರಿ ಎನ್ನುತ್ತಲೆ ಕಣ್ಣೀರು ಹಾಕಿದರು.

ಕೃಷ್ಣಾ ನದಿ ನೀರು ಹೆಚ್ಚುತ್ತಿರುವರಿಂದ ನದಿ ಪಾತ್ರದ ಜನರು ಯಾವುದೇ ತಮ್ಮ ದನ ಕರಗಳು ಹಾಗೂ ಜನರು, ನಮ್ಮ ಪುಟ್ಟ ಮಕ್ಕಳನ್ನು ನದಿ ಕಡೆಗೆ ಹೋಗಲು ಬಿಡಬಾರದು. ನೀರಿನ ಪ್ರವಾಹ ಮಟ್ಟ ತಿಳಿದುಕೊಂಡು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಆಗಬೇಕು. ರೈತರಲ್ಲಿ ಮನವಿ ಮಾಡುತ್ತೇವೆ. ಪ್ರವಾಹ ಪರಿಸ್ಥಿತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. -ಶ್ವೇತಾ ಬೀಡಿಕರ, ಉಪವಿಭಾಗಾಧಿಕಾರಿ ಜಮಖಂಡಿ ಈಗಾಗಲೇ ಎಲ್ಲ ಪ್ರವಾಹ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದೇವೆ. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತಾಲೂಕ ಆಡಳಿತ ಸನ್ನದ್ಧವಾಗಿದೆ. ನಿರಂತರ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ನದಿ ಪಾತ್ರದ ನಡುಗಡ್ಡೆಯ ಜನರು ಅಧಿಕಾರಿಗಳ ಜೊತೆ ಸಹಕರಿಸಬೇಕು. ನದಿ ಕಡೆಗೆ ಹೋಗಬಾರದು. -ಅನಿಲ್ ಬಡಿಗೇರ ಜಮಖಂಡಿ ತಹಸೀಲ್ದಾರ