ದೊಡ್ಡಬಳ್ಳಾಪುರ; ನಗರದ ಕೊಂಗಾಡಿಯಪ್ಪ ಕಾಲೇಜ್ ರಸ್ತೆಯ ನ್ಯಾಷನಲ್ ಪೆಡ್ ಶಾಲೆಯಲ್ಲಿ ಶ್ರೀ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್, ಹರ್ಷಿಣಿ ಗ್ರೂಪ್ ಆಫ್ ಯೋಗ ಇನ್ ಕೂರ್ಮಾಸನ ಹಾಗೂ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರ ಸಹಯೋಗದಲ್ಲಿ ಮಂಗಳವಾರ ಪ್ರಥಮ ವಿಶ್ವಮಟ್ಟದ ಕೂರ್ಮಾಸನ ಭಾರ ಹೊರುವ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಕಣ್ಮನ ಸೆಳೆಯಿತು.
ವಿವಿಧ ವಯೋಮಾನದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ಕೂರ್ಮಾಸನದಲ್ಲಿ 25 ರಿಂದ 200 ಕೆ.ಜಿ ತೂಕ ಹೊತ್ತರು. ನಂತರ ಐಚ್ಛಿಕ ಆಸನಗಳನ್ನು ಪ್ರದರ್ಶಿಸಿದರು.
ತಾಲೂಕಿನಲ್ಲಿ ಅಸಂಖ್ಯಾತ ಯೋಗಪಟುಗಳಿದ್ದಾರೆ. ಆದರೆ ಕೂರ್ಮಾಸನ ಭಾರ ಹೊರುವ ಕ್ರಿಯೆಗಳನ್ನು ಮಾಡುವವರು ಸ್ಪಲ್ಪ ಮಂದಿ ಇದ್ದಾರೆ. ತಾಲೂಕಿನಲ್ಲಿ ಇದೇ ಪ್ರಥಮವಾಗಿ ಕೂರ್ಮಾಸನ ಭಾರ ಹೊರುವ ಪ್ರದರ್ಶನ ಆಯೋಜನೆ ಮಾಡಲಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ ತಿಳಿಸಿದರು.
ಯೋಗ ಶಿಕ್ಷಕ, ಕೂರ್ಮಾಸನ ತ ಎಚ್.ಎಸ್.ರಾಮಕೃಷ್ಣ ಮಾತನಾಡಿ, ಯೋಗದ ಕೂರ್ಮಾಸನದಲ್ಲಿ ಹೆಚ್ಚಿನ ಭಾರ ಹೊರುವ ಸಾಮರ್ಥ್ಯ ಯೋಗಪಟು ಹೊಂದಿರುತ್ತಾರೆ. ಕೂರ್ಮಾಸನ ನಮ್ಮ ಪಾರಂಪರಿಕ ಯೋಗ ಪದ್ದತಿಗಳಲ್ಲಿ ಒಂದಾಗಿದ್ದು, ಋಷಿಮುನಿಗಳು ಇದನ್ನು ಮಾಡುತ್ತಿದ್ದರು ಎಂದರು.
ಈ ಪದ್ಧತಿಯಲ್ಲಿ ವ್ಯಕ್ತಿ ತನ್ನ ತೂಕಕ್ಕಿಂತ ಸುಮಾರು ನಾಲೈದು ಪಟ್ಟು ತೂಕ ಹೊರುವ ಸಾಮರ್ಥ್ಯ ಹೊಂದಿರುತ್ತಾನೆ. ಆದರೆ ಕ್ರಮಬದ್ದವಾಗಿ ಮಾಡಿದಾಗ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ, ನೋಡಲು ಕ್ಲಿಷ್ಟಕರವೆನಿಸಿದರೂ ಯೋಗ ಪಟುವಿಗೆ ಯಾವುದೇ ನೋವು, ಆಯಾಸ ಗೋಚರಿಸುವುದಿಲ್ಲ. ಈ ಯೋಗದಿಂದ ಹೃದಯ ಸಂಬಂಧ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.