ರಾಮನಗರ: ತಮ್ಮ ಸ್ವಾರ್ಥಕ್ಕಾಗಿಯೇ ಅಧಿಕಾರದಲ್ಲಿರುವ ಪಕ್ಷಕ್ಕೆ ಪಕ್ಷಾಂತರ ಮಾಡುವ ಸಿ.ಪಿ. ಯೋಗೇಶ್ವರ್, ಈಗ ಕಾಂಗ್ರೆಸ್ ಸೇರುವ ಮೂಲಕ ಹರಕೆಯ ಕುರಿಯಾಗಿದ್ದಾರೆ ಎಂದು ಬಿಜೆಪಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ನಗರ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದ, ಕಾಂಗ್ರೆಸ್ನಲ್ಲಿ ಮೂರನೇ ಸಾಲಿಗೆ ಹೋಗಿದ್ದಾರೆ. ಚುನಾವಣೆ ನಂತರ ಯಾವ ಸಾಲಿಗೆ ಹೋಗಲಿದ್ದಾರೆ ನೋಡಬೇಕು ಎಂದು ವ್ಯಂಗವಾಡಿದರು.
ಯೋಗೇಶ್ವರ್ ಪಾಂತರ ವೈಯಕ್ತಿಕ ಅನುಕೂಲಕ್ಕಾಗಿ ಹೊರತು, ಕ್ಷೇತ್ರದ ಅಭಿವೃದ್ಧಿಗೆ ಅಲ್ಲ ಎಂದು ಟೀಕಿಸಿದರು. ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಿಸುವ ಸಲುವಾಗಿ ನಾನು, ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸೇರಿದಂತೆ ಬಿಜೆಪಿ ನಾಯಕರು ನಿರಂತರವಾಗಿ ಪ್ರಯತ್ನ ಮಾಡಿದೆವು. ಕಡೆಗೆ ಜೆಡಿಎಸ್ ಟಿಕೆಟ್ ನೀಡಲು ಎಚ್.ಡಿ. ಕುಮಾರಸ್ವಾಮಿ ಒಪ್ಪಿದರು. ಅದನ್ನೂ ನಿರಾಕರಿಸಿದಾಗ ಬಿಜೆಪಿಯಿಂದಲೇ ಕಣಕ್ಕಿಳಿಸಲು ಮುಂದಾದರು.
ಅಷ್ಟೊತ್ತಿಗಾಗಲೇ ಸಿಪಿವೈ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ, ರಾತ್ರೋರಾತ್ರಿ ಆ ಪಕ್ಷ ಸೇರಿ ಬಿಜೆಪಿಗೆ ದ್ರೋಹ ಬಗೆದರು. ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿರುವುದರಿಂದ ಕಣದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ನಿಖಿಲ್ ಗೆಲುವಿಗೆ ಎರಡೂ ಪಕ್ಷಗಳ ನಾಯಕರು ಪಣ ತೊಟ್ಟಿದ್ದು, ಅವರ ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಹೆಚ್ಚಿದೆ. ಚನ್ನಪಟ್ಟಣದ ಜನ ಕಾಂಗ್ರೆಸ್ ಅನ್ನು ಯಾವ ಕಾರಣಕ್ಕೂ ನಂಬಿಲ್ಲ. ಮುಂದೆಯೂ ನಂಬುವುದಿಲ್ಲ. ಪಕ್ಷ ತೊರೆದು ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಯೋಗೇಶ್ವರ್ ಸೋಲಲಿದ್ದಾರೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಚನ್ನಪಟ್ಟಣದಲ್ಲಿ ಏತ ನೀರಾವರಿ ಯೋಜನೆಗೆ 150 ಕೋಟಿ ರೂ ಮಂಜೂರು ಮಾಡಿದ್ದೆ. ಇದರಿಂದಾಗಿಯೇ ಇಲ್ಲಿನ ಕೆರೆಗಳು ತುಂಬಿವೆ. ಆದರೆ ಯೋಗೇಶ್ವರ್ ತಾನು ಕೆರೆಗಳನ್ನು ತುಂಬಿಸಿದೆ ಎಂದು ಭಗೀರಥ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಅವರಲ್ಲ ನಾನು ಭಗೀರಥ, ಬಿಜೆಪಿ ಪಕ್ಷ ಭಗೀರಥ. ಚನ್ನಪಟ್ಟಣಕ್ಕೆ ನೀರು ತುಂಬಿಸುವ ಯೋಜನೆ ಕ್ರೆಡಿಟ್ ನನಗೇ ಬರಬೇಕು.
ಆದರೆ, ಯೋಗೇಶ್ವರ್ ಅದರ ಕ್ರೆಡಿಟ್ ತೆಗೆದುಕೊಂಡು ಭಗೀರಥ ಎಂದು ಹೇಳಿಕೊಂಡು ಚುನಾವಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಹಾಗೆ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸವಾಲು ಹಾಕಿದರು.
ಈ ಉಪ ಚುನಾವಣೆ ನಮಗೆ ದೊಡ್ಡ ಸವಾಲು. ಇಲ್ಲಿ ವ್ಯಕ್ತಿಯೇ ಪಕ್ಷ ಎಂದು ಬಿಂಬಿಸಿಕೊಂಡು ಪ್ರತಿ ಸಲ ಸ್ಚಾರ್ಥಕ್ಕಾಗಿ ಪಕ್ಷಾಂತರ ಮಾಡಿದ ಯೋಗೇಶ್ವರ್ ರಾಜಕಾರಣದಲ್ಲಿ ಇರಬೇಕೊ ಬೇಡವೊ ಎಂದು ನಿರ್ಧರಿಸುವ ಚುನಾವಣೆ ಇದಾಗಿದೆ. ಆರನೇ ಸಲ ಪಕ್ಷಾಂತರ ಮಾಡಿರುವ ಯೋಗೇಶ್ವರ್ ನಡೆಯು ರಾಜಕೀಯ ಪಕ್ಷಗಳಿಗೂ ದೊಡ್ಡ ಪಾಠ. ನಾವು ಈ ಭಾಗದಲ್ಲಿ ಅವರ ಮೇಲೆ ಅವಲಂಬಿನೆಯಾಗಿದ್ದು ನಿಜ. ಈಗ ಅವರು ಮಾಡಿರುವ ದ್ರೋಹಕ್ಕೆ ಜನರು ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಹೇಳಿದರು.