ಚನ್ನಪಟ್ಟಣ
ಕುಮಾರಸ್ವಾಮಿ ಅವರೇ ಜೆಡಿಎಸ್ ಗೆ ಟಿಕೆಟ್ ತೆಗೆದುಕೊಂಡರೆ ನಾನು ಕೆಲಸ ಮಾಡುತ್ತೇನೆ. ನಾನು ಹಾಗೂ ನಮ್ಮ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡರೆ ಯೋಗೇಶ್ವರ್ ಮುಂದಿನ ನಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಪಕ್ಷದ ಜೊತೆ ನಿಲ್ಲಬೇಕು ಅಂತ ತೀರ್ಮಾನ ಮಾಡಿದ್ದೀನಿ.
ನಾನು ಸ್ಪರ್ಧೆ ಮಾಡಬೇಕು ಅನ್ನೋದು ಕಾರ್ಯಕರ್ತರ ಒತ್ತಾಯವಾಗಿದೆ. ಇಷ್ಟು ವರ್ಷ ಪಕ್ಷದ ಜೊತೆ ಕೆಲಸ ಮಾಡಿದ್ದೀನಿ. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಹಾಗಾಗಿ, ಪಕ್ಷದ ಜೊತೆ ಹೋಗೋದು ಒಳ್ಳೆಯದು ಎಂಬುದು ಹಿತೈಷಿಗಳ ಭಾವನೆ. ಜೆಡಿಎಸ್ ಗೆ ಟಿಕೆಟ್ ಆದರೂ ನಾನು ಕೆಲಸ ಮಾಡುತ್ತೇನೆ. ಮುಂದೆ ಅವಕಾಶ ಬರುತ್ತದೆ ಕಾದು ನೋಡೊಣ ಎಂದರು.
ನಮ್ಮ ಹಿರಿಯ ಮುಖಂಡರ ಜೊತೆ ರಾಷ್ಟ್ರೀಯ ನಾಯಕರನ್ನ ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಚುನಾವಣೆ ಪ್ರಕಟವಾದಮೇಲೆ ಟಿಕೆಟ್ ಬಗ್ಗೆ ತೀರ್ಮಾನ ಆಗುತ್ತದೆ. ನಮ್ಮ ಹೈಕಮಾಂಡ್ ನಾಯಕರು ಹಲವು ಸಲಹೆ, ಸೂಚನೆ ನೀಡಿದ್ದಾರೆ. ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಚುನಾವಣೆಗೆ ಹೋಗಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು. ಕ್ಷೇತ್ರದ ವಿದ್ಯಮಾನದ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ನೀಡಿದ್ದೀನಿ. ಕಾಂಗ್ರೆಸ್ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತವಾಗಿದೆ. ದೆಹಲಿ ಪ್ರವಾಸದಲ್ಲಿ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದೇನೆ ಎಂದರು.
ಯಾರೇ ಅಭ್ಯರ್ಥಿ ಆಗಲಿ, ಬೇಗ ತೀರ್ಮಾನ ಆದರೆ ಒಳ್ಳೆಯದು. ಇದು ಉಪಚುನಾವಣೆ ಆಗಿರೋದ್ರಿಂದ ಇಡೀ ಸರ್ಕಾರ ಚುನಾವಣೆ ಮಾಡುತ್ತದೆ. ಚುನಾವಣೆಯಲ್ಲಿ ಪರೋಕ್ಷವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ನಾವು ಹೋರಾಡಬೇಕಿದೆ. ಟಿಕೆಟ್ ಬಗ್ಗೆ ಎರಡೂ ಪಕ್ಷದ ಹಿರಿಯರು ಆದಷ್ಟು ಬೇಗ ತೀರ್ಮಾನ ಮಾಡಬೇಕು.
ವರಿಷ್ಠರ ಭೇಟಿ ಬಳಿಕ ಪಕ್ಷ ನನ್ನ ಜೊತೆ ಇದೆ, ಪಕ್ಷದ ವರಿಷ್ಠರು ಜೊತೆಗಿದ್ದಾರೆ ಅಂತ ಅನ್ನಿಸಿದೆ. ಟಿಕೆಟ್ ಸಿಗಲಿ, ಸಿಗದೇ ಇರಲಿ ನಾನು ಪಕ್ಷದ ಜೊತೆ ಇರುತ್ತೇನೆ. ನೀನು ಆತುರ ಪಡಬೇಡ ಇರು ಅಂತ ಪಕ್ಷ ಹೇಳಿದೆ. ಹಾಗಾಗಿ, ಪಕ್ಷದ ಆದೇಶ ಮೀರಿ ಹೋಗಬಾರದು ಅಂತ ಅನಿಸುತ್ತಿದೆ ಎಂದರು.
ಅತಂತ್ರವಾದ ಈ ಕಾಂಗ್ರೆಸ್ ಸರ್ಕಾರ ಯಾವಾಗ ಏನು ಬೇಕಾದರೂ ಆಗಬಹುದು. ಉಪಚುನಾವಣೆ ಬಳಿಕ ಸರ್ಕಾರ ಇರುತ್ತ, ಇರಲ್ವಾ ಅಂತ ಗೊತ್ತಿಲ್ಲ. ಸರ್ಕಾರ ಹಗರಣಗಳಲ್ಲಿ ನಲುಗುತ್ತಿದೆ. ಈ ಸಂದರ್ಭದಲ್ಲಿ ಈ ಚುನಾವಣೆ ಗೆಲ್ಲಬೇಕು ಎನ್ನುವ ಹಠ ಮೈತ್ರಿ ಪಕ್ಷದಲ್ಲಿದೆ ಎಂದರು.