ಶಿರಸಿ/ಸಿದ್ದಾಪುರ: ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಆದ ನಂತರ ಬಿಜೆಪಿಯ ಆರ್. ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮಾತು ಕೇಳುವವರಿಲ್ಲ. ಹೀಗಾಗಿಯೇ ಎಂಎಲ್ಸಿ ಆಗಿದ್ದ ಸಿ.ಪಿ. ಯೋಗೇಶ್ವರ ಅವರು ಸ್ವತಃ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಬಂದಿದ್ದಾರೆ ಎಂದು ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿರಸಿ ಹಾಗೂ ಸಿದ್ದಾಪುರಕ್ಕೆ ಭಾನುವಾರ ಭೇಟಿ ನೀಡಿದ ಅವರು, ಮಾಧ್ಯಮದೊಂದಿಗೆ ಮಾತನಾಡಿದರು. ಯೋಗೇಶ್ವರ ಅವರನ್ನು ನಾವಾಗಿಯೇ ಪಕ್ಷಕ್ಕೆ ಕರೆದುಕೊಂಡು ಬಂದಿಲ್ಲ. ಅವರು ಬಂದಿರುವುದು ಕಾಂಗ್ರೆಸ್ ಪಕ್ಷ ಹಾಗೂ ಚನ್ನಪಟ್ಟಣ ಕ್ಷೇತ್ರಕ್ಕೆ ಶಕ್ತಿ ಬಂದಂತಾಗಿದೆ ಎಂದರು.
ರಾಜ್ಯದಲ್ಲಿ ಉಪ ಚುನಾವಣೆಯ ಮೂರೂ ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ. ಸರ್ಕಾರ ಬಿದ್ದು ಹೋಗುತ್ತದೆ ಎನ್ನುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಯಡಿಯೂರಪ್ಪನವರು ಜೈಲಿಗೆ ಹೋಗುವ ಪೂರ್ವದಲ್ಲಿ ಈ ಭವಿಷ್ಯ ಹೇಳಬೇಕಿತ್ತು ಎಮದು ಕಿಚಾಯಿಸಿದರು.
ಮುಡಾ ಹಗರಣ ಆರೋಪ ಸಾಬೀತಾದರೆ ಮಾತ್ರ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೇ ಹೊರತೂ ಆರೋಪ ಬಂದಾಗಲೇ ತಪ್ಪಿತಸ್ಥ ಎಂದು ಹೇಳಬಾರದು ಎಂದರು. ಬಿಜೆಪಿ, ಜೆಡಿಎಸ್ ಕೂಗಾಟಕ್ಕೆ ನಾವು ಎಂದಿಗೂ ಬಗ್ಗುವುದಿಲ್ಲ. ಬಿಜೆಪಿಯ 10 ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿದ್ದಾರೆ. ಯಡಿಯೂರಪ್ಪನವರ ಮೇಲಿನ ಪೊಕ್ಸೋ ಕಾಯ್ದೆ ಬಗ್ಗೆ ವಿಜಯೇಂದ್ರ ಮಾತನಾಡಲಿ ಎಂದರು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಹಿಂದೆ ಬಸವರಾಜ ಬೊಮ್ಮಾಯಿಯವರ ಸರ್ಕಾರದ ಅವಧಿಯಲ್ಲೇ ಆಗಿದೆ. ಬೊಮ್ಮಾಯಿ ಅವರು ಹಾಗೇ ಇಟ್ಟಿದ್ದ ಈ ಫೈಲ್ ಅನ್ನು ಡಿಸಿಎಂ ಡಿ.ಕೆ. ಶಿವಕುಮಾರ ಪರಿಶೀಲನೆ ಮಾಡಿದ್ದಾರೆ. 18ರಿಂದ 20 ಸಾವಿರ ಕೋಟಿ ರೂ. ಅಗತ್ಯವಿರುವ ಕಾರಣ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇಲ್ಲ ಎಂದರು.
ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ತಾರಾನಾಥ, ಗಣಪತಿ ಮಂಡಗಳಲೆ, ಮಾರುತಿ ಕಿಂದ್ರಿ, ನಾಸಿರ್ ಖಾನ್, ಇತರರಿದ್ದರು.