ಜಿಲ್ಲೆ

ಯೋಗೇಶ್ವರ್ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ : ಕೇಂದ್ರ ಸಚಿವ ವಿ. ಸೋಮಣ್ಣ

ಮೈಸೂರು: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ದುಡುಕಿನ ನಿರ್ಧಾರವಾಗಿದ್ದು, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಗೆಲುವು ನಿಶ್ಚಿತ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎನ್‌ಡಿಎ ಪರವಾದ ಅಲೆ ಇದ್ದು, ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದರು.

ಮುಡಾ ಅಕ್ರಮ ವಿಚಾರ ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ. ಮುಡಾದಲ್ಲಿ ಇಷ್ಟೊಂದ ಅಕ್ರಮ ನಡೆದಿದೆ ಅಂದುಕೊಂ ಡಿರಲಿಲ್ಲ. ನಾನು ಈ ಹಿಂದೆ ಮೈಸೂರು ಜಿಲ್ಲಾ ಮಂತ್ರಿಯಾಗಿದ್ದೆ. ಆ ಸಂದರ್ಭ ಮುಡಾ ನಿವೇಶನಗಳ ಕುರಿತು ಮಾಹಿತಿ ಪಡೆದು 7,200 ನಿವೇಶನಗಳನ್ನು ಹರಾಜು ಹಾಕಲು ತೀರ್ಮಾನ ಕೈಗೊಂಡಿದ್ದೆ. ಆದರೆ, ಆ ನಿವೇಶನಗಳನ್ನು ಜನರಿಗೆ ಹಂಚಿಕೆ ಮಾಡಲು ಆ ಸಂದರ್ಭದಲ್ಲಿ ಸಾಧ್ಯವಾಗಲಿಲ್ಲ. ಇದೀಗ ಮುಡಾ ಹಗರಣ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆಯಿಂದ ಸತ್ಯಾಂಶ ಬಯಲಿಗೆ ಬರಲಿ ಎಂದು ಹೇಳಿದರು.