ವಿಜಯವಾಣಿ ಸುದ್ದಿಜಾಲ ಧಾರವಾಡ
ಬಿಜೆಪಿ ಮುಖಂಡನಾಗಿದ್ದ ಯೋಗೇಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬ೦ದಿಸಿ ಸಿಬಿಐ ತಂಡ ನಗರದಲ್ಲಿ ಸೋಮವಾರ ತನಿಖೆಗೆ ಆಗಮಿಸಿತ್ತು. ಯೋಗೇಶಗೌಡ ಕೊಲೆಯಾಗಿದ್ದ ಸಪ್ತಾಪುರದ ಸ್ಥಳಕ್ಕೆ ಭೇಟಿ ನೀಡಿದ್ದ ತನಿಖಾಽಕಾರಿ ರಾಕೇಶ ರಂಜನ್ ನೇತೃತ್ವದ ತಂಡ ತನಿಖೆ ನಡೆಸಿತು.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಯೋಗೇಶಗೌಡ ಅವರನ್ನು 2016ರ ಜೂ. 15ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸಪ್ತಾಪುರದಲ್ಲಿರುವ ಉದಯ ಜಿಮ್‌ನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಳಲ್ಲಿ ಒಬ್ಬರಾದ ಮಾಜಿ ಸಚಿವ ವಿನಯ ಕುಲಕರ್ಣಿ ಸಹ ಬಂಧಿತರಾಗಿ ಜೈಲುವಾಸ ಅನುಭವಿಸಿದ್ದಾರೆ.
ಸಿಬಿಐ ಅಧಿಕಾರಿಗಳು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. ಬೆಂಗಳೂರಿನ ಜನಪ್ರತಿನಿಽಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ವಿಚಾರಣೆಗೆ ಆಗಮಿಸಿದ್ದ ಸಿಬಿಐ ಅಽಕಾರಿಗಳು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆಗೆ ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ್ದರು. ಇದೇವೇಳೆ ಪ್ರಕರಣದ ಸಾಕ್ಷಿಗಳಿಗೆ ಸಮನ್ಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.