ಜಿಲ್ಲೆ

ಚಾಮುಂಡಿಬೆಟ್ಟದಲ್ಲಿ ಯೋಗ ಚಾರಣ, ದುರ್ಗಾ ನಮಸ್ಕಾರ

ಮಂಜುನಾಥ ತಿಮ್ಮಯ್ಯ

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಕಾರ್ಯಕ್ರಮ ನೆರವೇರಿತು.

ವಿಶ್ವವಿಖ್ಯಾತ ಮೈಸೂರು ದಸರಾದ 7ನೇ ದಿನವಾದ ಬುಧವಾರ ಯೋಗ ದಸರಾ ಉಪ ಸಮಿತಿಯಿಂದ ಇದನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 7ಗಂಟೆಗೆ ಚಾಮುಂಡಿಬೆಟ್ಟದ ಆವರಣದಲ್ಲಿ ನೆರೆದಿದ್ದ ಯೋಗಪಟುಗಳ ದೃಶ್ಯವು ಮೈಸೂರಿನ ಸೊಬಗನ್ನು ಹೆಚ್ಚಿಸಿತು.


ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಯುವಕರು, ಹಿರಿಯ, ಸಾರ್ವಜನಿಕರು ಸೇರಿ ಮೈಸೂರಿನ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 250 ಜನರು ಭಾಗವಹಿಸಿದ್ದರು.

ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಸೇರಿ ವಿವಿಧ ಭಂಗಿಗಳ ಪ್ರದರ್ಶಿಸಲಾಯಿತು. ಯೋಗಪಟುಗಳು ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ, ಸೂರ್ಯ ನಮಸ್ಕಾರ, ವಜ್ರಾಸನ, ಸ್ವಾನಾಸನ, ತ್ರಿಕೋನಾಸನ, ಶವಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರಸ್ತುತಪಡಿಸಿದರು. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮವು ಯೋಗ ದಸರಾಗೆ ಮತ್ತಷ್ಟು ಮೆರುಗು ತಂದಿತು.

ಯೋಗ ಅಧಿಕಾರೇತರ ಉಪಸಮಿತಿ ಅಧ್ಯಕ್ಷ ಎಂ.ಮಹೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಎಸ್‌ಎಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ, ಯೋಗ ದಸರಾ ಉಪಸಮಿತಿ ವಿಶೇಷಾಧಿಕಾರಿ ಕೆ.ರಮ್ಯಾ, ಕಾರ್ಯಾಧ್ಯಕ್ಷ ಅನಂತರಾಜು, ಕಾರ್ಯದರ್ಶಿ ಪುಷ್ಪಾ, ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ವೈ.ಎಸ್.ರವಿಕುಮಾರ್ ಸೇರಿದಂತೆ ಇತರರು ಇದ್ದರು.